ನಾಳೆಯಿಂದ ರಾಜ್ಯಾದ್ಯಂತ ಮಳೆ ನಿರೀಕ್ಷೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಹಿಂಗಾರು ಚುರುಕಾಗಲು ಪೂರಕ ವಾತಾವರಣ ಸೃಷ್ಟಿಯಾಗಲಿದ್ದು, ಮಂಗಳವಾರದಿಂದ (ಡಿ. 4) ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ತುಂತುರು ಅಥವಾ ಸಾಧಾರಣ ಮಳೆ, ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ವಿಜಯಪುರದಲ್ಲಿ ತುಂತುರು ಮಳೆಯಾಗಲಿದೆ.

ಪ್ರಸ್ತುತ ರಾಜ್ಯದಲ್ಲಿ ಒಣಹವೆಯಿದ್ದು, ಬೆಳಗಿನ ಜಾವ ಮಂಜು ಕವಿದ ವಾತಾವರಣವಿದೆ. ಒಣಹವೆ ಕಾರಣದಿಂದಾಗಿ ವಿಜಯಪುರ, ಹಾವೇರಿ, ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 13-15 ಡಿಗ್ರಿ ಸೆಲ್ಸಿಯಸ್ ಗಡಿಯಲ್ಲಿದೆ.

ಶೇ. 48 ಹಿಂಗಾರು ಮಳೆ ಕೊರತೆ

ಹಿಂಗಾರು ಪ್ರಾರಂಭವಾದಾಗಿಂದಲೂ ನಿರೀಕ್ಷಿತ ಪ್ರಮಾಣದ ಮಳೆ ರಾಜ್ಯದಲ್ಲಾಗಿಲ್ಲ. ಹಿಂಗಾರು ಅವಧಿ ಆರಂಭವಾದ ಅ.1 ರಿಂದ ಡಿ.2ರವರೆಗೆ ವಾಡಿಕೆಯಂತೆ ಸರಾಸರಿ 179 ಮಿ.ಮೀ. ಮಳೆಯಾಗಬೇಕು. ಆದರೆ, 93.5 ಮಿ.ಮೀ. ಮಳೆಯಾಗಿದ್ದು, ಶೇ.48 ಮಳೆ ಕೊರತೆಯಾಗಿದೆ. ದಕ್ಷಿಣ ಒಳನಾಡು, ಕರಾವಳಿಗೆ ಹೋಲಿಸಿದರೆ ಉ. ಕರ್ನಾಟಕದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಸರಾಸರಿ 139.8 ಮಿ.ಮೀ. ಮಳೆಯಾಗಬೇಕಿದ್ದ ಪ್ರದೇಶದಲ್ಲಿ 46.9 ಮಿ.ಮೀ. ಮಳೆಯಾಗಿದೆ. ಕರಾವಳಿ ಯಲ್ಲಿ ಶೇ.32 ಹಾಗೂ ದ. ಒಳನಾಡಿನಲ್ಲಿ ಶೇ.41 ಹಿಂಗಾರು ಕೊರತೆಯಾಗಿದೆ.