ಆಲಿಕಲ್ಲು ಮಳೆಗೆ ಕಾಫಿನಾಡಿನ ಜನ ಖುಷ್​: ಶಿರಸಿಯಲ್ಲಿ ಮತದಾನಕ್ಕೆ ಅಡ್ಡಿಪಡಿಸಿದ ವರುಣ

ಚಿಕ್ಕಮಗಳೂರು/ಶಿರಸಿ: ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಕಾಫಿನಾಡು ಹಾಗೂ ಉತ್ತರ ಕನ್ನಡ ಜನತೆಗೆ ವರುಣ ತಂಪೆರೆದಿದ್ದಾನೆ. ಚಿಕ್ಕಮಗಳೂರು ಹಾಗೂ ಶಿರಸಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಖುಷ್​ ಆಗಿದ್ದು, ಇಂದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಡೆಯುತ್ತಿರುವ ಎರಡನೇ ಹಂತದ ಮತದಾನಕ್ಕೆ ಮಳೆರಾಯ ಕೊಂಚ ಅಡ್ಡಿಪಡಿಸಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತ ಕಳೆದು ಒಂದು ಗಂಟೆಯಿಂದ ಮಳೆ ಅಬ್ಬರಿಸುತ್ತಿದ್ದು, ಗುಡುಗು ಮತ್ತು ಗಾಳಿ ಮಿಶ್ರಿತ ಮಳೆಗೆ ಹಲವು ಮರಗಳು ಧರೆಗುರುಳಿವೆ. ಜಿಲ್ಲೆಯ ಬಾಳೆಹೊನ್ನೂರು ಪ್ರದೇಶದ ಸುತ್ತಮುತ್ತ ಅಲಿಕಲ್ಲು ಮಳೆಯಾಗಿದ್ದು, ಸ್ಥಳೀಯರು ಆಲಿಕಲ್ಲು ಸಂಗ್ರಹಿಸುತ್ತಿದ್ದ ಚಿತ್ರಣ ಸಾಮಾನ್ಯವಾಗಿ ಕಂಡುಬಂದಿತು.

ಮತದಾನಕ್ಕೆ ಮಳೆರಾಯನ ಅಡ್ಡಿ
ಶಿರಸಿಯಲ್ಲೂ ಆರ್ಭಟಿಸುತ್ತಿರುವ ಗುಡುಗು-ಸಿಡಿಲು ಸಹಿತ ಭಾರಿ ಮಳೆಗೆ ಮರಗಳು ಧರೆಗುರುಳಿವೆ. ಮಿಂಚು-ಸಿಡಿಲಿಗೆ ಹೆದರಿ ಸಾರ್ವಜನಿಕರ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದು, ಇದರಿಂದ ಮತದಾನಕ್ಕೆ ಅಡ್ಡಿ ಉಂಟಾಗಿದೆ. ಮತದಾರರು ಬರದೆ ಮತಗಟ್ಟೆಗಳು ಬಿಕೋ ಎನ್ನುತ್ತಿವೆ. ಮತ ಚಲಾಯಿಸಲು ಬಂದು ವೃದ್ಧರೊಬ್ಬರು ಮಳೆಗೆ ಸಿಕ್ಕಿ ಹಿಂದಿರುಗಲು ಹರಸಾಹಸ ಪಡುತ್ತಿದ್ದಾರೆ. ಸತತ ಅರ್ಧ ಗಂಟೆಯಿಂದ ಸುರಿಯುತ್ತಿರುವ ಮಳೆಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್​)