ಹಲವೆಡೆ ಬಿಸಿಲು ವಾತಾವರಣ ನದಿಗಳ ಆರ್ಭಟ ಕಡಿಮೆ, ಕರಾವಳಿಯಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು: ಹಲವು ದಿನಗಳಿಂದ ರಾಜ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆ ಇಳಿಮುಖವಾಗುವುದರೊಂದಿಗೆ ನದಿಗಳ ಆರ್ಭಟವೂ ಕಡಿಮೆಯಾಗಿದೆ. ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರ ಬಿಸಿಲು ವಾತಾವರಣ ಕಾಣಿಸಿಕೊಂಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಾತ್ರ ಮುಂದಿನ ಮೂರು ದಿನ ತುಸು ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಇದೆ. ಆದರೆ. ಮಳೆ ತೀವ್ರತೆ ಅಷ್ಟೊಂದು ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆ ಭಾಗಗಳಲ್ಲಿ ಈಗಾಗಲೆ ಬಿಸಿಲು ವಾತಾವರಣ ಉಂಟಾಗಿದ್ದು, ಆ.8ರಿಂದ ಅಲ್ಲಿಯೂ ಮಳೆ ಕ್ಷೀಣವಾಗಲಿದೆ. ಪ್ರಸ್ತುತ ಹವಾಮಾನ ಸ್ಥಿತಿ ಗಮನಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಆ.5ರಿಂದ ಆ.11ರವರೆಗೆ ಮಳೆ ಇರುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
3 ತಾಲೂಕುಗಳಲ್ಲಿ ಮಳೆ ಕೊರತೆ: ರಾಜ್ಯದಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆ ಸುರಿದರೂ ಆರು ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಜೂ.1ರಿಂದ ಆ.3ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ ಒಟ್ಟಾರೆ 498 ಮಿಮೀ ಮಳೆಯಾಗಬೇಕಿತ್ತು. ಆದರೆ, 655 ಮಿಮೀ ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ.32 ಅಧಿಕವಾಗಿದೆ. ಈ ವೇಳೆ 47 ತಾಲೂಕಿನಲ್ಲಿ ವಾಡಿಕೆಗಿಂತ ಅತಿ ಅಧಿಕ, 111 ತಾಲೂಕುಗಳಲ್ಲಿ ಅಧಿಕ, 72 ತಾಲೂಕಿನಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಆದರೆ, 6 ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆಯಾಗಿದೆ.
ಮಳುಗು ತಜ್ಞ ವಾಪಸ್: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕು ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರ ಪತ್ತೆಗೆ ಮಳುಗು ತಜ್ಞ ಈಶ್ವರ ಮಲ್ಪೆ ಆಗಮಿಸಿದ್ದರು. ಆದರೆ, ಗಂಗಾವಳಿ ನದಿಯ ಹರಿವು ಜೋರಾಗಿರುವುದರಿಂದ ಪೊಲೀಸರು ಅವರಿಗೆ ನೀರಿಗಿಳಿಯಲು ಅವಕಾಶ ನೀಡಲಿಲ್ಲ. ಜಿಲ್ಲಾಡಳಿತ ಕರೆದಾಗ ಮತ್ತೆ ಬರುವುದಾಗಿ ತಿಳಿಸಿ ಅವರು ವಾಪಸಾಗಿದ್ದಾರೆ.
ದೊಡ್ಡತಪ್ಪಲುವಿನಲ್ಲಿ ಕಾರ್ಯಾಚರಣೆ
ಹಾಸನ ಜಿಲ್ಲೆ ಸಕಲೇಶಪುರ ವ್ಯಾಪ್ತಿಯ ಶಿರಾಡಿ ಘಾಟ್ನ ದೊಡ್ಡತಪ್ಪಲುನಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಗುಡ್ಡ ಕುಸಿತಗೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಮಳೆಯ ನಡುವೆಯೂ ಮಣ್ಣು ತೆರವು ಕಾರ್ಯ ನಿರಂತರವಾಗಿ ಸಾಗುತ್ತಿದೆ. ಸ್ಥಳದಲ್ಲಿ ಆಗಾಗ ಮಣ್ಣು ಜರಿದು ರಸ್ತೆಗೆ ಬೀಳುತ್ತಿದ್ದು, ರಕ್ಷಣಾ ದೃಷ್ಟಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸರು ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸ್ಥಳದಲ್ಲಿ ಎಸ್ಡಿಆರ್ಎಫ್ ಪಡೆ ಬೀಡು ಬಿಟ್ಟಿದ್ದು, 13 ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು, ಅಗ್ನಿಶಾಮಕದಳ ಕಾರ್ಯಪ್ರವೃತ್ತವಾಗಿದೆ. ಲೋಕೋಪಯೋಗಿ ಸೇರಿ ಇತರ ಅಭಿಯಂತರು ಸ್ಥಳದಲ್ಲಿದ್ದಾರೆ.
ನಾಳೆಯಿಂದ ರೈಲು ಸಂಚಾರ
ಎಡಕುಮೇರಿ-ಕಡಗರವಳ್ಳಿ ನಡುವೆ ಭೂಕುಸಿತದಿಂದ ಹಾನಿಗೊಳಗಾಗಿದ್ದ ರೈಲು ಹಳಿ ದುರಸ್ತಿ ಪೂರ್ಣಗೊಂಡಿದ್ದು, ಸುಬ್ರಹ್ಮಣ್ಯ ರೋಡ್ ನಿಲ್ದಾಣ ಮಾರ್ಗದಲ್ಲಿ ಮಂಗಳೂರು- ಬೆಂಗಳೂರು ರೈಲು ಆ.6ರಿಂದ ಮತ್ತೆ ಸಂಚರಿಸಲಿದೆ.
ನಿವೃತ್ತಿ ಪಡೆಯಲಿರುವ ಗೋಲ್ಕೀಪರ್ ಪಿ.ಆರ್ ಶ್ರೀಜೇಶ್ ಭಾವುಕ; ಹಾಕಿ ಸ್ಟಿಕ್ ಮೇಲೆ ಪತ್ನಿ ಹೆಸರು ಅರಳಿಸಿದ ದಿಗ್ಗಜ