ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮುಂಜಾನೆ ವೇಳೆ ಹಠಾತ್ ಅಕಾಲಿಕ ಮಳೆ ಸುರಿದಿದೆ. ಸೂರ್ಯೋದಯದ ಅವಧಿಯಲ್ಲೇ ಮೋಡ ಕವಿದ ವಾತಾವರಣವಿತ್ತು. 7.30-8ರ ವೇಳೆಗೆ ಮಳೆ ಸುರಿಯಲು ಆರಂಭವಾಗಿದೆ. ಕೆಲವೆಡೆ ತುಂತುರು, ಕೆಲವೆಡೆ ರಸ್ತೆಯಲ್ಲಿ ನೀರು ಹರಿದು ಹೋಗುವಷ್ಟು ಜೋರು ಸುರಿದಿದೆ.
ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ತಾಲೂಕಿನ ಅಲ್ಲಲ್ಲಿ ಸುರಿದ ಮಳೆಗೆ ಅಡಕೆ ಕೃಷಿಕರು ಸಂಕಷ್ಟ ಅನುಭವಿಸಿದರು. ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ ತೆಗೆದು ಒಳಹಾಕಲು ಅಥವಾ ಟಾರ್ಪಾಲು ಹೊದಿಸುವ ಮುನ್ನವೇ ಮಳೆ ಬಂದು ಬಹುತೇಕ ಒದ್ದೆಯಾಗಿದೆ. ಇಡ್ಕಿದು, ಕೋಲ್ಪೆ, ಈಶ್ವರ ಮಂಗಲ, ಮಾಣಿ, ಕಡಿರುದ್ಯಾವರ, ಬಡಗನ್ನೂರು, ಪುಣಚ, ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಮಂಗಳೂರು, ನಗರ ಆಸುಪಾಸಿನ ಪ್ರದೇಶಗಳಲ್ಲೂ ಮೋಡ ಕವಿದ ವಾತಾವರಣವಿದ್ದು, ಕೆಲವು ಕಡೆ ಮಳೆ ಹನಿದಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 32.6 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರ ಭಾಗದಲ್ಲಿ ಗಾಳಿಯ ಅಬ್ಬರ ಜೋರಾಗಿದ್ದು, ಇದರಿಂದ ದಟ್ಟ ಮೋಡಗಳು ಉಂಟಾಗಿ ಭೂ ಪ್ರದೇಶದತ್ತ ಬರುತ್ತಿವೆ. ಈ ಮೋಡ ಪಶ್ಚಿಮ ಕರಾವಳಿ ಭಾಗಕ್ಕೂ ತೇಲಿ ಬರುತ್ತಿದ್ದು, ಇವುಗಳಿಂದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.