ಕೇಳೋರಿಲ್ಲ ನಡುಗಡ್ಡೆ ಜನರ ಗೋಳು

ಜಮಖಂಡಿ(ಗ್ರಾ): ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ತಾಲೂಕಿನ ಮುತ್ತೂರ ಗ್ರಾಮದ ನಡುಗಡ್ಡೆೆ ಸುತ್ತ ನೀರು ಆವರಿಸಿದ್ದು, ಸಂಪರ್ಕ ಮಾರ್ಗಗಳು ನೀರಲ್ಲಿ ಮುಳಗಿರುವುದರಿಂದ ಅಲ್ಲಿ ವಾಸಿಸುತ್ತಿರುವ 60ಕ್ಕೂ ಅಧಿಕ ಕುಟುಂಬಗಳು ಸೌಲಭ್ಯಗಳಿಗಾಗಿ ಪರದಾಡುವಂತಾಗಿದೆ.

ತಾಲೂಕಾಡಳಿತ ನಡುಗಡ್ಡೆ ಜನರಿಗೆ ಸಂಪರ್ಕದ ಏಕೈಕ ಸಾಧನವಾಗಿರುವ ಬೋಟ್​ಗೆ ಸಿಮೇಎಣ್ಣೆ ಮತ್ತು ಪೆಟ್ರೋಲ್ ಮಿಶ್ರಿತ ಇಂಧನ ಪೂರೈಕೆ ಮಾಡದಿರುವುದರಿಂದ ಜನರು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ತುಬಚಿ ಮತ್ತು ಮುತ್ತೂರು ಮಾರ್ಗವಾಗಿ ಜಮಖಂಡಿ, ಸಾವಳಗಿ ಮತ್ತಿತರ ಪಟ್ಟಣಗಳಿಗೆ ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಶುದ್ಧ ಕುಡಿವ ನೀರಿನ ವ್ಯವಸ್ಥೆಯೂ ಇಲ್ಲದೇ ಜನರು ನದಿಯ ನೀರು ಕುಡಿಯುವುದು ಅನಿವಾರ್ಯವಾಗಿದೆ. ಜಮೀನುಗಳಿಗೆ ನೀರು ನುಗ್ಗಿರುವುದರಿಂದ ನಡುಗಡ್ಡೆಯ ಜನ ಪ್ರಮುಖ ಆದಾಯದ ಮೂಲವಾದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ.

ವರದಿಗಾರರಿಗೂ ತಟ್ಟಿದ ಸಮಸ್ಯೆ ಬಿಸಿ: ಮುತ್ತೂರ ನಡುಗಡ್ಡೆ ಜನ ಎದುರಿಸುತ್ತಿರುವ ಸಮಸ್ಯೆ ಮೇಲೆ ಬೆಳಕು ಚೆಲ್ಲಲು ವರದಿಗಾರರು ಶುಕ್ರವಾರ ಬೋಟ್ ಮೂಲಕ ನಡುಗಡ್ಡೆಗೆ ತೆರಳಿದ್ದರು. ಆದರೆ, ಮರಳಿ ಬರಲು ಬೋಟ್​ಗೆ ಇಂಧನ ಇಲ್ಲದೆ 4 ಗಂಟೆಗೂ ಅಧಿಕ ಸಮಯ ಅಲ್ಲಿಯೇ ಕಾಲ ಕಳೆಯುವಂತಾಯಿತು. ತಹಸೀಲ್ದಾರ್​ರನ್ನು ದೂರವಾಣಿ ಮೂಲಕ ಸಂರ್ಪಸಿದ ಬಳಿಕ ಅಧಿಕಾರಿಗಳ ಬೇರೊಂದು ಬೋಟ್​ನಲ್ಲಿ ಇಂಧನ ತಂದು ಮರಳಿ ಬರಲು ವ್ಯವಸ್ಥೆ ಮಾಡಿದರು. ಈ ವೇಳೆ ಅಧಿಕಾರಿಗಳು ನಡುಗಡ್ಡೆ ನಿವಾಸಿಗಳ ಜತೆಗೆ ಒಂದು ತಾಸಿಗೂ ಅಧಿಕ ಕಾಲ ಸಭೆ ನಡೆಸಿ ಸಮಸ್ಯೆ ಆಲಿಸಿ ಸೂಕ್ತ ಸೌಲಭ್ಯ ಒದಗಿಸುವ ಭರವಸೆ ನೀಡಿದರು.

ನದಿ ತೀರದ ಗ್ರಾಮಗಳ ಸಂಪರ್ಕ ರಸ್ತೆ ಸ್ಥಗಿತ: ಕೃಷ್ಣಾ ನದಿ ನೀರಿ ಪ್ರಮಾಣ ಹೆಚ್ಚುತ್ತಿರುವುದರಿಂದ ತಾಲೂಕಿನ ಕಂಕಣವಾಡಿ ಕ್ರಾಸ್-ಕಂಕಣವಾಡಿ, ಜಕನೂರ- ಕುಂಚನೂರ, ಚಿಕ್ಕಪಡಸಲಗಿ ಸೇರಿದಂತೆ ನದಿ ತೀರದ ಗ್ರಾಮಗಳ ಒಳದಾರಿಗಳು ಜಲಾವೃತವಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗುತ್ತಿದೆ.

ಕಂಕಣವಾಡಿ ಕ್ರಾಸ್​ನಿಂದ ಕಂಕಣವಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ಹರಿಯುತ್ತಿದ್ದರಿಂದಾಗಿ ಸಂಚಾರ ಸ್ಥಗಿತಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಆಲಬಾಳ, ಮೈಗೂರ, ಶಿರಗುಪ್ಪಿ ಗ್ರಾಮಸ್ಥರು ಕಂಕಣವಾಡಿಗೆ ಹೋಗಬೇಕಾದರೆ, ಜಮಖಂಡಿಗೆ ಆಗಮಿಸಿ ಕಡಕೋಳ ಕ್ರಾಸ್ ಮೂಲಕ ತೆರಳಬೇಕಾಗಿದೆ.

ಜಕನೂರ-ಕುಂಚನೂರ ಹಾಗೂ ಕುಂಚನೂರ- ಚಿಕ್ಕಪಡಸಲಗಿ ಒಳದಾರಿ ಜಲಾವೃತಗೊಂಡಿದೆ. ಜಕನೂರ ಗ್ರಾಮಸ್ಥರು ಕುಂಚನೂರಿಗೆ ತೆರಳಬೇಕಾದರೆ ಕುಂಚನೂರ ಕ್ರಾಸ್ ಮಾರ್ಗದ ಮೂಲಕ ತೆರಳಬೇಕು. ಕುಂಚನೂರ ಗ್ರಾಮಸ್ಥರು ಪಡಸಲಗಿಗೆ ತೆರಳಬೇಕಾದರೆ ಜಮಖಂಡಿಗೆ ಬಂದು ವಿಜಯಪುರ ರಸ್ತೆ ಮೂಲಕ ತೆರಳಬೇಕಾಗಿದೆ.

ಪುನರ್ವಸತಿ ಸಮಸ್ಯೆ: ನಡುಗಡ್ಡೆಯಲ್ಲಿ ಸುಮಾರು 60 ಕುಟುಂಬಗಳ 250ಕ್ಕೂ ಅಧಿಕ ಜನ ಹಾಗೂ 300ಕ್ಕೂ ಅಧಿಕ ಜಾನುವಾರುಗಳಿದ್ದು, ಗ್ರಾಮದಲ್ಲಿ ಪುನರ್ವತಿ ಕಲ್ಪಸುವುದು ತಾಲೂಕಾಡಳಿತಕ್ಕೆ ಸವಾಲಿನ ಕೆಲಸವಾಗಿದೆ. ಅಲ್ಲದೆ ಜಾನುವಾರು ಸಾಗಿಸಲು ವಾರದವರೆಗೆ ಸಮಯ ಹಿಡಿಯುತ್ತದೆ. ನಡುಗಡ್ಡೆಯ ಜನರು ಉಪಯೋಗಿಸುವ ಬೋಟ್​ನ ಇಂಜಿನ್ ಆರಂಭಕ್ಕೆ ಸಮಪ್ರಮಾಣದ ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಮಿಶ್ರಿತ ಇಂಧನ ಬೇಕು. ಆದರೆ ಸೀಮೆಎಣ್ಣೆ ದೊರೆಯದಿರುವುದು ಅಧಿಕಾರಿಗಳು ಹಾಗೂ ನಿವಾಸಿಗಳಿಗೆ ದೊಡ್ಡ ತೆಲೆನೋವುವಾಗಿ ಪರಿಣಮಿಸಿದೆ.