Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಮಲೆನಾಡಲ್ಲಿ ತಗ್ಗದ ಮಳೆ

Sunday, 15.07.2018, 3:03 AM       No Comments

ಬೆಂಗಳೂರು: ಕರಾವಳಿಯಲ್ಲಿ ಮಳೆ ಆರ್ಭಟ ತಗ್ಗಿದ್ದರೂ ಮಲೆನಾಡಿನ ಹಲವೆಡೆ ಅದರ ಅಬ್ಬರ ಶುಕ್ರವಾರವೂ ಮುಂದುವರಿದಿದ್ದು, ಮಳೆ ಅವಾಂತರದಿಂದಾಗಿ ರೈತ ಸೇರಿ ಮೂವರು ಮೃತಪಟ್ಟಿದ್ದಾರೆ.

ಅಂಕೋಲಾದ ಪೂಜಗೇರಿಯಲ್ಲಿ ಶನಿವಾರ ಕೃಷಿಗೆ ತೆರಳಿದ್ದ ಅಶೋಕ ದೇವು ಗಾಂವಕರ (45) ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಗದ್ದೆಯಲ್ಲಿದ್ದ ನೀರು ಬಿಡಿಸುತ್ತಿದ್ದಾಗ ದುರಂತ ಸಂಭವಿಸಿದೆ. ಭಾರಿ ಗಾಳಿ-ಮಳೆಯಿಂದಾಗಿ ಯಲ್ಲಾಪುರದ ಬೀರಗದ್ದೆ ಕ್ರಾಸ್ ಬಳಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ತಂದೆ-ಮಗ ಮೃತಪಟ್ಟಿದ್ದಾರೆ. ಅಂಕೋಲಾ ಕನಕನಹಳ್ಳಿ ನಾಗರಾಜ ಸಾಲಗಾಂವ್ಕರ (28), ಸುಭಾಷ (60) ಮೃತರು.

ಶಿವಮೊಗ್ಗ ಜಿಲ್ಲೆಯಲ್ಲಿ ತೀರ್ಥಹಳ್ಳಿ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವರುಣನ ಆರ್ಭಟ ಮತ್ತೆ ಹೆಚ್ಚಾಗಿದೆ. ತೀರ್ಥಹಳ್ಳಿಯ ದೊಡ್ಲಿಮನೆ ಸಮೀಪ ಕಾಲುಸಂಕದಿಂದ ಜಾರಿ ಬಿದ್ದು ವಿದ್ಯಾರ್ಥಿನಿ ಆಶಿಕಾ ಮೃತಪಟ್ಟ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಕಾಲುಸಂಕಕ್ಕೆ ಕಬ್ಬಿಣದ ರಕ್ಷಣಾ ಸರಳುಗಳನ್ನು ಅಳವಡಿಸಿದ್ದಾರೆ. ಆಶಿಕಾ ಮನೆಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಆನಂದಪುರದ ಚೆನ್ನಶೆಟ್ಟಿಕೊಪ್ಪದಲ್ಲಿ ಡಾಕಪ್ಪ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಮುರಿದು ಬಿದ್ದು ಎತ್ತು ಸಾವನ್ನಪ್ಪಿದೆ. ಹೊಸನಗರದ ಕೆಸರಮನೆಯಲ್ಲಿ ತೆಂಗಿನ ಮರ ಕೊಟ್ಟಿಗೆ ಮೇಲೆ ಬಿದ್ದಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಮಳೆಯಬ್ಬರ ಮುಂದುವರಿದಿದ್ದು ಇಲ್ಲಿನ ಹೆಬ್ಬಾಳೆ ಸೇತುವೆ ಇದೀಗ 6ನೇ ಬಾರಿಗೆ ಮುಳುಗಡೆಯಾಗಿದೆ. ಬಾಳೆಹೊನ್ನೂರು ರಂಭಾಪುರಿ ಮಠ ಕಾಲನಿಯ ಪಾರ್ವತಿ ಎಂಬವರ ಮನೆ ಮೇಲೆ ಶುಕ್ರವಾರ ರಾತ್ರಿ ಮರ ಬಿದ್ದು ಮನೆ ಜಖಂಗೊಂಡಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಉತ್ತರಕನ್ನಡದ ಕರಾವಳಿಯಲ್ಲಿ ಮಳೆ ಕಡಿಮೆಯಾಗಿದ್ದರೂ ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಭೋರ್ಗರೆಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮ 8 ದಿನಗಳಿಂದ ಜಲಾವೃತವಾಗೇ ಇದೆ.

ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ವಿರಾಮ

ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಸೌರ ಮತ್ತು ಪವನ ಮೂಲದ ವಿದ್ಯುತ್ ಉತ್ಪಾದನೆ ಏರಿಕೆಯಿಂದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಒತ್ತಡ ತಗ್ಗಿದೆ. ಬೇಸಿಗೆಯಲ್ಲಿ 11 ಸಾವಿರ ಮೆ.ವಾ.ವರೆಗೆ ತಲುಪಿದ್ದ ರಾಜ್ಯದ ವಿದ್ಯುತ್ ಬೇಡಿಕೆ ಪ್ರಸ್ತುತ 6, 264ಕ್ಕೆ ಕುಸಿದಿದೆ. ಅಸಾಂಪ್ರದಾಯಿಕ ಇಂಧನ ಮೂಲಗಳಿಂದ 4,815 ಮೆ.ವಾ. ಹಾಗೂ ಕೇಂದ್ರ ಜಾಲದಿಂದ 767 ಮೆ.ವಾ. ವಿದ್ಯುತ್ ಲಭಿಸುತ್ತಿರುವುದರಿಂದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕೆಲ ಘಟಕಗಳಿಗೆ ವಿಶ್ರಾಂತಿ ನೀಡಲಾಗಿದೆ. ರಾಯಚೂರಿನ ಆರ್​ಟಿಪಿಎಸ್​ನ 8 ಘಟಕಗಳ ಪೈಕಿ ಎರಡೇ ಘಟಕಗಳಿಂದ 314 ಮೆ.ವಾ. ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ವೈಟಿಪಿಎಸ್​ನ 2 ಹಾಗೂ ಬಿಟಿಪಿಎಸ್​ನ 3 ಘಟಕಗಳಿಗೆ ವಿಶ್ರಾಂತಿ ನೀಡಲಾಗಿದೆ. ಆ ಮೂಲಕ ಕಲ್ಲಿದ್ದಲು ಶೇಖರಣೆಗೂ ಅವಕಾಶ ಸಿಕ್ಕಂತಾಗಿದೆ.

ಇನ್ನೂ ಪತ್ತೆ ಆಗಿಲ್ಲ ಶವ

ಕೊಪ್ಪ ತಾಲೂಕು ಹುಲ್ಲಿನಗದ್ದೆ ಸೇತುವೆಯಿಂದ ನೀರಿನ ಸೆಳೆತಕ್ಕೆ ಕೊಚ್ಚಿಹೋದ ಅಶೋಕನಿಗಾಗಿ ಎನ್​ಡಿಆರ್​ಎಫ್ ಹಾಗೂ ನುರಿತ ಮುಳುಗು ತಜ್ಞರ ತೀವ್ರ ಕಾರ್ಯಾಚರಣೆ ನಡೆಸಿದರೂ ಶನಿವಾರವೂ ಸುಳಿವು ಸಿಗಲಿಲ್ಲ.

19ರ ವರೆಗೂ ಮಳೆ: ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಜು.19ರವರೆಗೆ ಮಳೆಯಬ್ಬರ ಮುಂದುವರಿಯುವ ಸೂಚನೆ ಇದೆ. ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು, ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ದೇವಸ್ಥಾನಗಳು ಜಲಾವೃತ

ಚಿಕ್ಕೋಡಿ: ಧಾರಾಕಾರ ಮಳೆಯಿಂದ ಕೃಷ್ಣಾ ನದಿಗೆ 98,882 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಕಲ್ಲೋಳ ಬಳಿಯ ದತ್ತ, ಕಾರದಗಾದ ಜಂಗಲಿಬಾಬಾ ದೇವಸ್ಥಾನಗಳು ಜಲಾವೃತವಾಗಿವೆ. ತಾಲೂಕಿನ 8 ಕೆಳಹಂತದ ಸೇತುವೆಗಳ ಪೈಕಿ 6 ಎರಡು ದಿನಗಳಿಂದ ಜಲಾವೃತಗೊಂಡಿದ್ದು, ಸೇತುವೆಗಳ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಮಲಪ್ರಭಾ ನದಿಯಲ್ಲಿ ಭಾಗಶಃ ಮುಳುಗಿದ್ದ ಇಟಗಿ ಮರುಳಶಂಕರ, ಹಬ್ಬನಹಟ್ಟಿ ಆಂಜನೇಯ ದೇಗುಲಗಳು ಶನಿವಾರ ಸಂಪೂರ್ಣ ಮುಳುಗಿವೆ.

Leave a Reply

Your email address will not be published. Required fields are marked *

Back To Top