ರಾಜ್ಯದೆಲ್ಲೆಡೆ ಅಬ್ಬರಿಸಿದ ವರುಣ, ರಾಜಧಾನಿಯಲ್ಲೂ ವರ್ಷ ಧಾರೆ

ಬೆಂಗಳೂರು: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

ಲಾಲ್​ಬಾಗ್​ ರಸ್ತೆ, ಶಾಂತಿನಗರ, ವಿಲ್ಸನ್ ಗಾರ್ಡನ್, ಕಾರ್ಪೋರೇಷನ್, ದಾಸರಹಳ್ಳಿ, 8ನೇ ಮೈಲಿ, ಚೊಕ್ಕಸಂದ್ರ, ಜಾಲಹಳ್ಳಿ ಕ್ರಾಸ್, ಮೆಜೆಸ್ಟಿಕ್​​, ಸಂಪಂಗಿ ರಾಮನಗರ, ಮಾರ್ಕೆಟ್, ಶಿವಾಜಿನಗರ ಮತ್ತು ಡೇರಿ ಸರ್ಕಲ್​ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ವಿದ್ಯುತ್​ ಕಡಿತಗೊಳಿಸಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

ಆನೇಕಲ್ ತಾಲೂಕಿನಾದ್ಯಂತ ಬಿರುಗಾಳಿ, ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಮಳೆಗೆ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಅತ್ತಿಬೆಲೆ, ಚಂದಾಪುರ ಸುತ್ತಮುತ್ತಲೂ ಭಾರಿ ಮಳೆಯಾಗಿದೆ.

ಕೋಟೆನಾಡಿನಲ್ಲೂ ಸುರಿದ ಮಳೆ

ಚಿತ್ರದುರ್ಗ ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹೊಳಲ್ಕೆರೆ ಪಟ್ಟಣದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ಹರಿದು ರಾತ್ರಿಯಿಡಿ ನಿವಾಸಿಗಳು ಸಂಕಷ್ಟ ಅನುಭವಿಸಬೇಕಾಯಿತು. ಜಿಲ್ಲೆಯಾದ್ಯಂತ ಸುಮಾರು 3 ತಾಸು ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕೋಲಾರದಲ್ಲಿ ಆಲಿಕಲ್ಲು ಸಹಿತ ಮಳೆ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ  ಬೂದಿಕೋಟೆ ಹೋಬಳಿ ಸುತ್ತಮುತ್ತ ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆಯಾಗಿದೆ. ಪಾಲಿ ಹೌಸ್‌ಗಳು ಸೇರಿದಂತೆ ವಿವಿಧ ಬೆಳೆಗಳು ನಾಶವಾಗಿದ್ದು, ಬೃಹತ್ ಗಾತ್ರದ ಆಲಿ ಕಲ್ಲು ಮಳೆಗೆ ರೈತರು ಕಂಗಾಲಾಗಿದ್ದಾರೆ. (ದಿಗ್ವಿಜಯ ನ್ಯೂಸ್‌)

Leave a Reply

Your email address will not be published. Required fields are marked *