ವರ್ಷ ಕಳೆದರೂ ಕಂಬ ಬದಲಿಸದೇ ಮುರಿದ ಕಂಬದಿಂದಲೇ ಕರೆಂಟ್ ಪೂರೈಸುತ್ತಿರುವ ಮೆಸ್ಕಾಂ

ಕಳಸ: ಕಳಸ ಗ್ರಾಪಂ ವ್ಯಾಪ್ತಿಯ ಗುಡ್ಡೆಮಕ್ಕಿ ಎಂಬಲ್ಲಿ 2018ರ ಜೂನ್ ಮಳೆಗಾಲದಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬವನ್ನು ವರ್ಷಕಳೆದರೂ ಬದಲಾಯಿಸದೆ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ವರ್ಷದ ಹಿಂದೆ ಸುರಿದ ಭಾರಿ ಗಾಳಿ, ಮಳೆಗೆ ಗುಡ್ಡೆಮಕ್ಕಿಯಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದಿತ್ತು. ಮೆಸ್ಕಾಂ ಸಿಬ್ಬಂದಿ ಈಗ ಮಳೆಗಾಲವಾಗಿರುವುದರಿಂದ ಇಲ್ಲಿಗೆ ಕಂಬತಂದು ಅಳವಡಿಸಲು ಸಾಧ್ಯವಾಗುವುದಿಲ್ಲ. ಮಳೆಗಾಲ ಮುಗಿದ ಮೇಲೆ ಕಂಬ ಅಳವಡಿಸುತ್ತೇವೆ. ಈಗ ಸದ್ಯಕ್ಕೆ ಪಕ್ಕದ ಮನೆಯಿಂದ ಸರ್ವಿಸ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ನೀಡುತ್ತವೆ ಎಂದು ಹೇಳಿ ಸುಮಾರು 200 ಅಡಿ ದೂರವಿರುವ ಮನೆಯಿಂದ ಕಾಫಿ ತೋಟಗಳ ಮಧ್ಯ ಲೈನ್ ಅಳವಡಿಸಿಹೋದವರು ಮತ್ತೆ ಇತ್ತಕಡೆ ಸುಳಿದಿಲ್ಲ.

ಸಣ್ಣ, ಸಣ್ಣ ಮರದ ಕೋಲುಗಳ ಸಹಾಯದಿಂದ ತೋಟದ ಮಧ್ಯ ಕೈಗೆಟಕುವ ರೀತಿಯಲ್ಲಿ ಲೈನ್ ಎಳೆದು ವಿದ್ಯುತ್ ಸಂಪರ್ಕ ನೀಡಲಾಗಿದೆ. ಅಪಾಯದ ಮಟ್ಟದಲ್ಲಿರುವ ಈ ವಿದ್ಯುತ್ ಲೈನ್​ನಿಂದ ಪ್ರಾಣ ಹಾನಿಯಾಗುವ ಸಾಧ್ಯತೆ ಇದೆ.

ಓದು, ಬರಹ ತಿಳಿಯದ ನಮಗೆ ಈ ವಿದ್ಯುತ್ ಮಾರ್ಗದ್ದೇ ಚಿಂತೆ. ನಾವು ತೋಟಕ್ಕೆ ಹೋದಾಗ ನಮಗೆ ವಿದ್ಯುತ್ ಸ್ಪರ್ಶವಾಗುವ ಭಯವಿದೆ. ಮೆಸ್ಕಾಂ ಸಿಬ್ಬಂದಿ, ಅಧಿಕಾರಿಗಳಿಗೆ ತಿಳಿಸಿ ಒಂದು ವರ್ಷ ಕಳೆದರೂ ಕಂಬ ಬದಲಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

ಒಂದು ತಿಂಗಳು ಬಿಲ್ ಕಟ್ಟುವುದು ತಡವಾದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೆಸ್ಕಾಂಗೆ ಸಾರ್ವಜನಿಕರು ಇರುವ ಜಾಗದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದು ಒಂದು ವರ್ಷವಾದರೂ ದುರಸ್ತಿಗೆ ಮುಂದಾಗದಿರುವುದು ನಿರ್ಲಕ್ಷದ ಪರಮಾವಧಿ.

ವರ್ಷಕ್ಕೊಮ್ಮೆ ಬಿಲ್ ನೀಡುವ ಸಿಬ್ಬಂದಿ: ಗುಡ್ಡೆಮಕ್ಕಿಗೆ ಪ್ರತಿ ತಿಂಗಳು ವಿದ್ಯುತ್ ಬಿಲ್ ನೀಡಲು ಮೆಸ್ಕಾಂ ಸಿಬ್ಬಂದಿ ಬರುವುದಿಲ್ಲ. ವರ್ಷಕ್ಕೆ, ಆರು ತಿಂಗಳಿಗೆ ಒಮ್ಮೆ ಬಂದು ಬಿಲ್ ಕೊಟ್ಟು ಹೋಗುತ್ತಾರೆ. ಪ್ರತಿ ತಿಂಗಳು ನಮಗೆ 60 ರೂ.ಬಿಲ್ ಬರುತ್ತಿತ್ತು. ಈ ಬಾರಿ 900 ರೂ. ಕಟ್ಟುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಯಾರಿಗೆ ದೂರು ನೀಡಬೇಕು ಎನ್ನುವುದೇ ನಮಗೆ ತಿಳಿಯದಾಗಿದೆ ಎನ್ನುತ್ತಾರೆ ಮುಖಂಡ ವೀರಪ್ಪ.

ಬಿದ್ದ ಕಂಬದಲ್ಲೇ ವಿದ್ಯುತ್ ಪೂರೈಕೆ: ಒಂದು ವರ್ಷದ ಹಿಂದೆ ಧರೆಗೆ ಉರುಳಿದ ಕಂಬ ಇನ್ನೂ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದೆ. ಅದರಲ್ಲಿದ್ದ ಕೇಬಲ್​ಗಳು ಮಣ್ಣಿನಲ್ಲಿ ಹೂತು ಹೋಗಿದೆ. ಆ ಕಂಬಕ್ಕೆ ಹೊಂದಿಕೊಂಡ ಇನ್ನೊಂದು ವಿದ್ಯುತ್ ಕಂಬಕ್ಕೆ ವಾಹನ ಡಿಕ್ಕಿ ಹೊಡೆದು ಆ ಕಂಬವೂ ಮುರಿದು ಹೋಗಿದೆ. ಅದೇ ಕಂಬದಿಂದ ಇನ್ನೊಂದು ಮನೆಗೆ ವಿದ್ಯುತ್ ಸರಬರಾಜು ಮಾಡಲಾಗಿದೆ.

Leave a Reply

Your email address will not be published. Required fields are marked *