ಜಿಲ್ಲೆಯಲ್ಲಿ ಮಳೆಯಿಂದ ಮನೆಗಳಿಗೆ ಹಾನಿ 1,027 ಜನಕ್ಕೆ ತಲಾ 4,100 ರೂ. ಪರಿಹಾರ

<ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಳಿಕೆ>

ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಮಳೆ, ಗಾಳಿಯಿಂದಾದ ಹಾನಿ ಕುರಿತು ಸಮೀಕ್ಷೆ ನಡೆಸಿ 1,027 ಮನೆಗಳಿಗೆ ಹಾನಿಯಾಗಿರುವುದನ್ನು ಗುರುತಿಸಲಾಗಿದೆ. ಮನೆ ಮಾಲೀಕರಿಗೆ ತಲಾ 4,100 ರೂ.ಯಂತೆ ಅವರ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೇ 24 ಮತ್ತು 25ರಂದು ಮಳೆ, ಗಾಳಿಯಿಂದ ಮಾನ್ವಿ ತಾಲೂಕಿನ ಹರವಿ, ಗುಡದಿನ್ನಿ ಸೇರಿ ಹಲವೆಡೆ ಕಚ್ಚಾ ಮನೆಗಳಿಗೆ ಹಾನಿಯಾಗಿದೆ. ಮುಂಗಾರು ಮಳೆ ಆರಂಭವಾಗಿರುವುದರಿಂದ ಕೃಷಿ ಅಧಿಕಾರಿಗಳ ಸಭೆ ನಡೆಸಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಉತ್ತಮ ಮಳೆಯಾಗಿರುವುದರಿಂದ ಬಿತ್ತನೆ ಆರಂಭಕ್ಕೆ ತೊಂದರೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾನ್ವಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಶ್ರೀನಿವಾಸ ಮತ್ತು ಬಸವರಾಜ ಎನ್ನುವ ರೈತರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಎಫ್‌ಎಸ್‌ಎಲ್ ವರದಿ ಬರಲು ತಡವಾಗಿರುವ ಕುರಿತು ಮಾಹಿತಿ ಕೇಳಲಾಗಿದೆ. ಈ ವರ್ಷದ ಮಾರ್ಚ್ ನಂತರದಲ್ಲಿ ಒಟ್ಟು ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಸುರಿದ ಆಲಿಕಲ್ಲು ಮಳೆಗೆ ಜಿಲ್ಲೆಯಲ್ಲಿ ಒಟ್ಟು 1.52 ಕೋಟಿ ರೂ. ಮೌಲ್ಯದ 2,237 ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿತ್ತು. ಈ ಕುರಿತು ಪರಿಹಾರ ವಿತರಣೆ ಮಾಡಬೇಕಾಗಿದೆ. ಕಳೆದ ಮುಂಗಾರಿನಲ್ಲಿ ಮಳೆಯಿಂದಾಗಿರುವ ಹಾನಿಗೆ ಪರಿಹಾರ ವಿತರಣೆ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.

ಬೆಂಬಲ ಬೆಲೆಯಲ್ಲಿ 21 ಸಾವಿರ ರೈತರಿಂದ ತೊಗರಿ ಖರೀದಿಸಿದವರಲ್ಲಿ 744 ರೈತರಿಗೆ ತೊಗರಿ ಹಣ ಪಾವತಿಯಾಗದಿರುವ ಬಗ್ಗೆ ಮಾಹಿತಿ ಬಂದಿದೆ. ಅವರಿಗೆ ಒಂದು ವಾರದಲ್ಲಿ ಹಣ ಪಾವತಿಸಲಾಗುವುದು. ರೈತರ ಹೆಸರು ಕೈಬಿಟ್ಟಿರುವುದರಿಂದ ಸಮಸ್ಯೆಯಾಗಿದ್ದು, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಕುಮಾರನಾಯಕ ತಿಳಿಸಿದರು.

ಬೆಳೆ ವಿಮೆ ಪಾವತಿಗೆ ವಿಮಾ ಕಂಪನಿಗಳು ಸ್ಪಂದನೆ ನೀಡುತ್ತಿಲ್ಲ. ಯುನೈಟೆಡ್ ಇನ್ಶೂರೆನ್ಸ್ ಮತ್ತು ಸೊಂಪ್ ಇನ್ಶೂರೆನ್ಸ್ ಕಂಪನಿಗಳಿಗೆ ಸೂಚನೆ ನೀಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ವೈಟಿಪಿಎಸ್ ಭೂ ಸಂತ್ರಸ್ತರಿಗೆ ಉದ್ಯೋಗ ಕೊಡುವ ಬಗ್ಗೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಜಿ.ಕುಮಾರನಾಯಕ ಹೇಳಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇತರರಿದ್ದರು.

Leave a Reply

Your email address will not be published. Required fields are marked *