Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಮಳೆಯಬ್ಬರ ನಿರಂತರ, ಮುಗಿಯದ ಅವಾಂತರ

Thursday, 12.07.2018, 3:04 AM       No Comments

ಬೆಂಗಳೂರು: ಕರಾವಳಿ-ಮಲೆನಾಡು ಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮಳೆ ಅವಾಂತರಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹುಲ್ಲಿನಗದ್ದೆ ಸೇತುವೆ ಮೇಲೆ ಉಕ್ಕಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಸಿಲುಕಿ ಕಾರೆಮನೆ ನಿವಾಸಿ ಅಶೋಕ್(21) ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾನೆ. ಶೋಧ ಕಾರ್ಯ ನಡೆಸಿದಾಗ ಬೈಕ್ ಸಿಕ್ಕಿದ್ದರೂ ಶವ ಪತ್ತೆಯಾಗಿಲ್ಲ. ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ. ಅಲ್ಲಿನ ನಾಗರಿಕರಿಗೆ ಬೋಟ್ ವ್ಯವಸ್ಥೆ ಮಾಡಲಾಗಿದೆ. ಬಾಳಲೆ, ನಿಟ್ಟೂರು ಭಾಗದ ನೂರಾರು ಎಕರೆ ಭತ್ತದ ಗದ್ದೆಗಳು, ವಿರಾಜಪೇಟೆ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಂಡಿವೆ. ಕಾವೇರಿ ನದಿಯಲ್ಲೂ ನೀರಿನ ಮಟ್ಟ ಹೆಚ್ಚಿದ್ದು, ಬೇತ್ರಿಯಿಂದ ಪಾರಣೆಗೆ ತೆರಳುವ ಹೆಮ್ಮಾಡು ಬಳಿ ಸೇತುವೆ ಮುಳುಗಡೆಗೊಂಡಿದ್ದು ಸಂಚಾರ ಸ್ಥಗಿತಗೊಂಡಿದೆ. ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಹುಟ್ಟುವ ಲಕ್ಷ್ಮಣತೀರ್ಥ, ರಾಮತೀರ್ಥ ಮತ್ತು ಕಕ್ಕಟ್ಟ್ ನದಿಗಳು ತುಂಬಿ ಹರಿಯುತ್ತಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಭಾರಿ ಮಳೆಯಾಗಿದೆ. ಉಡುಪಿ, ಮಂಡ್ಯ, ದಾವಣಗೆರೆ ಪ್ರದೇಶಲ್ಲಿ ಸಾಧಾರಣ ಮಳೆಯಾಗಿದೆ.

ಭೂಕುಸಿತ, ಬೆಳೆ ನಾಶ

ಹಾಸನದ ಸಕಲೇಶಪುರದಲ್ಲಿ ಜೋರು ಮಳೆಯಾಗಿದ್ದು, ಬಿಸಿಲೆ ಘಾಟ್​ನ ಹಲವೆಡೆ, ಹೊಂಗಡಹಳ್ಳ-ಸಕಲೇಶಪುರ ರಸ್ತೆ, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತವಾಗಿದೆ. ತಂಬೈಲು ಹೊಳೆ ತುಂಬಿ ಹರಿದಿದ್ದರಿಂದ ಗೊದ್ದು ಗ್ರಾಮದ ಸುಮಾರು 20 ಎಕರೆ ಕಾಫಿ ತೋಟ ಬಹುತೇಕ ನಾಶವಾಗಿದೆ. ಉಚ್ಚಂಗಿ ಹೊಳೆ ಉಕ್ಕಿ ಹರಿದು ಅಲ್ಲಿನ ನೂರಾರು ಎಕರೆ ಗದ್ದೆ ಮುಳುಗಡೆಯಾಗಿದೆ. ಶಿರಸಿ ಸಿದ್ದಾಪುರದಲ್ಲಿ ಗದ್ದೆಗಳು ಜಲಾವೃತಗೊಂಡಿವೆ. ಕನ್ನಳ್ಳಿಯ ಮಾಸ್ತಿ ಬಂಗಾರ್ಯ ಬಿಲ್ಲಛತ್ರಿ ಎಂಬುವರ ಅಡಕೆ ತೋಟದಲ್ಲಿ ಮರ ಬಿದ್ದು ಅಂದಾಜು 10 ಸಾವಿರ ರೂ. ಹಾನಿ ಸಂಭವಿಸಿದೆ.

ಸೇತುವೆ ಮುಳುಗಡೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ನಿರ್ವಣಗೊಂಡಿದೆ. ಉಪ್ಪಿನಂಗಡಿ ಸುಬ್ರಹ್ಮಣ್ಯ ಸಂಪರ್ಕ ಕಲ್ಪಿಸುವ ನೆಟ್ಟಣ ಸೇತುವೆ, ಕುಮಾರಧಾರಾ ಹಳೇ ಸೇತುವೆ, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ ಆಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಚಿಕ್ಕೋಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ , ವೇದಗಂಗಾ ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಕೆಳಹಂತದ 8 ಸೇತುವೆಗಳ ಪೈಕಿ 4 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಕಲ್ಲೋಳ-ಯಡೂರ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ವಿುಸಿರುವ ಬೋಜವಾಡಿ-ಕುನ್ನುರ ಸೇತುವೆ, ದೂಧಗಂಗಾ ನದಿಗೆ ಇರುವ ಮಲಿಕವಾಡ-ದತ್ತವಾಡ ಹಾಗೂ ದೂಧಗಂಗಾ-ವೇದಗಂಗಾ ನದಿ ಸಂಗಮ ಬಳಿ ಇರುವ ಕಾರದಗಾ-ಭೋಜ ಸೇತುವೆ ನೀರಿನಲ್ಲಿ ಮುಳುಗಿವೆ. ಹೊಸ ದಿಗ್ಗೇವಾಡಿ ಸಮೀಪದ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಿಕೊಡುವ ಕುಡಚಿ ಮುಖ್ಯಸೇತುವೆ ಮೇಲೆ ಕೃಷ್ಣಾ ನದಿ ನೀರು ಹರಿಯಲು ಕ್ಷಣಗಣನೆ ಆರಂಭವಾಗಿದೆ.

ಜಿಲ್ಲಾಡಳಿತಕ್ಕೆ ಎಚ್ಚರಿಕೆ

ಕೃಷ್ಣ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ನೀರು ದಿಢೀರ್ ಏರಿಕೆಯಾಗುತ್ತಿದ್ದು ಜಿಲ್ಲಾಡಳಿತಗಳು ಸೂಕ್ತ ಮುಂಜಾಗೃತಾ ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಭಡೇರಿಯಾ ಸೂಚಿಸಿದ್ದಾರೆ. ನದಿ ಪ್ರದೇಶಗಳಲ್ಲಿ ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಎಚ್ಚರಿಸಲು ವ್ಯಕ್ತಿಯೋರ್ವನನ್ನು ನಿಯೋಜಿಸುವಂತೆ ಸೂಚಿಸಲಾಗಿದೆ.

ಶೇ.12 ಅಧಿಕ ಮಳೆ

ರಾಜ್ಯದೆಲ್ಲೆಡೆ ಮುಂಗಾರು ಚುರುಕಾಗಿದ್ದು, ಕರಾವಳಿ-ಮಲೆನಾಡಿನ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಮಳೆಯಾಗುತ್ತಿದೆ. ಮುಂಗಾರು ಪ್ರಾರಂಭದಿಂದ ಜು.11ರವರೆಗೂ ರಾಜ್ಯದ 54 ತಾಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಹಾಗೂ 86 ತಾಲೂಕಿನಲ್ಲಿ ವಾಡಿಕೆ ಮಳೆ ದಾಖಲಾಗಿದೆ. ವಿಜಯಪುರದ ಸಿಂದಗಿ, ಬಸವನಬಾಗೇವಾಡಿ, ಇಂಡಿ, ರಾಯಚೂರಿನ ದೇವದುರ್ಗ, ಮಾನ್ವಿ, ಸಿಂಧನೂರು ಸೇರಿ ಬೆಳಗಾವಿ, ಹಾವೇರಿ, ಬೆಂಗಳೂರು ನಗರ, ಕೋಲಾರ, ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 36 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್​ಎನ್​ಡಿಎಂಸಿ) ತಿಳಿಸಿದೆ. ಜೂ.1ರಿಂದ ಜು.11ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ ಸರಾಸರಿ 294 ಮಿ.ಮೀ. ಮಳೆ ಆಗಬೇಕು. ಪ್ರಸಕ್ತ ವರ್ಷದಲ್ಲಿ 330 ಮಿ.ಮೀ. ಮಳೆ ದಾಖಲಾಗಿದ್ದು, ಶೇ.12 ಅಧಿಕ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಷ್ಟೇ ಸರಾಸರಿ ವಾಡಿಕೆ ಮಳೆ ಕೊರತೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಉತ್ತಮ ಆರಂಭ ಪಡೆದಿದೆ ಎಂದು ಅದು ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಜು.16ರವರೆಗೂ ಭಾರಿ ಮಳೆ ಮುನ್ಸೂಚನೆ ಇದೆ.

ಕಾವೇರಿ ಕಣಿವೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನೊಂದು ವಾರ ಮಳೆಯಾದರೆ ಕೆಆರ್​ಎಸ್ ಭರ್ತಿಯಾಗುತ್ತದೆ. ಆಗ ತಮಿಳುನಾಡಿಗೆ ನೀರು ಹರಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ.

| ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ

ಉಕ್ಕಿದ ನದಿ, ತುಂಬಿದ ಜಲಾಶಯಗಳು

ಮೈಸೂರಿನ ಕಬಿನಿ ಜಲಾಶಯಕ್ಕೆ ಬುಧವಾರ 50,000 ಕ್ಯೂಸೆಕ್ ಒಳಹರಿವಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಸನದ ಗೊರೂರಿನ ಹೇಮಾವತಿ ಜಲಾಶಯ ಭರ್ತಿಗೆ ಇನ್ನೂ 10 ಅಡಿಗಳಷ್ಟೇ ಬಾಕಿ ಇದ್ದು, ನೀರು ಹೊರಬಿಡಲು ಅಧಿಕಾರಿಗಳು ನಿರ್ಧರಿಸಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಕೆಆರ್​ಎಸ್, ಗಾಜನೂರಿನ ತುಂಗಾ ಅಣೆಕಟ್ಟೆ, ಲಿಂಗನಮಕ್ಕಿ, ಭದ್ರಾ ಜಲಾಶಯದಲ್ಲೂ ನೀರಿನ ಸಂಗ್ರಹ ಹೆಚ್ಚಾಗಿದೆ. ವರದಾ ನದಿ ಕೂಡ ಉಕ್ಕಿ ಹರಿಯುತ್ತಿದೆ.

Leave a Reply

Your email address will not be published. Required fields are marked *

Back To Top