ಇಳೆಗೆ ಮಳೆಯ ತೇರು

‘ಕವಿ ಸಮಯ’ ಎಂಬುವುದರಲ್ಲಿ ‘ವಸಂತ ಋತು’ ಮತ್ತು ‘ವರ್ಷ ಕಾಲ’ ಇವುಗಳಿಗಿರುವ ಪ್ರಾಧಾನ್ಯತೆ ಬೇರಾವುದಕ್ಕೂ ಇಲ್ಲವೆಂದೇ ಹೇಳಬಹುದು. ಪ್ರೇಮಿಗಳ ಸಮಾಗಮಕ್ಕೆ ವಸಂತನ ಪೌರೋಹಿತ್ಯ ಎಷ್ಟು ಅಗತ್ಯವೋ ಒಟ್ಟು ಜಗತ್ತಿನ ಜೀವ ಸೃಷ್ಟಿಗೆ ಮಳೆಗಾಲ ಅಷ್ಟು ಅಗತ್ಯ. ಮಳೆಯನ್ನು ಹಾಗಾಗಿಯೇ ‘ಜೀವಜಲ’ ಎನ್ನುವರು.

| ಸಂಧ್ಯಾ ಹೊನಗುಂಟಿಕರ್

ಬೇಸಿಗೆಯ ರಣಗುಡುವ ಬಿಸಿಲಲ್ಲಿ ಮಳೆಗಾಲವನ್ನು ನೆನಪಿಸಿಕೊಂಡರೆ ಸಾಕು, ಅದು ಒಂದು ದಿವ್ಯ ಅನುಭವ. ಭೂಮಿ ಮತ್ತು ಆಗಸಕ್ಕೆ ನಂಟು ಬೆಸೆದ ಫಲವೇ ಈ ಮಳೆ. ಮೊದಲ ಮಳೆಯ ಆಗಮನವೆಂದರೆ ಸಾಮಾನ್ಯವೇನಲ್ಲ. ದೊರೆಯ ಅರಮನೆಯಲ್ಲಿ ಮೊದಲ ಪುತ್ರನ ಜನನೋತ್ಸವ. ಅದಕ್ಕೆ ಅನೇಕಾನೇಕ ಅದ್ಭುತ ಪೂರ್ವಭಾವಿ ತಯಾರಿ. ಭೂರಮೆಯು ಮಿಲನೋತ್ಸವಕ್ಕೆ ಮೈ ಅರಳಿಸಿ ಕಾದು ನಿಂತ ಗಳಿಗೆಯೂ ಹೌದು. ವಸಂತನು ಬನದ ರೆಂಬೆ ಕೊಂಬೆಗಳಿಗೆಲ್ಲ ಹೊಸ ಚಿಗುರಿನ ಕುಚ್ಚು ಕಟ್ಟಿ ಹಂಸತೂಲಿಕಾ ಮಂಚ ನಿರ್ವಿುಸಿ ಮಧುಚಂದ್ರಕ್ಕೆ ಅಣಿಗೊಳಿಸುತ್ತಾನೆ. ಮದುವಣಗಿತ್ತಿ ಭೂರಮೆ ಇನಿಯನ ಸ್ಪರ್ಶ ನೆನೆಸಿಕೊಂಡಾಗಲೆಲ್ಲ ಉಂಟಾಗುವ ಅವಳೆದೆಯ ಬಡಿತವೇ ಆ ಪ್ರಚಂಡ ಗುಡುಗು. ಉಲ್ಲಸಿತ ಕಣ್ಣಿನ ಪ್ರಕಾಶವೇ ಆಕಾಶವನ್ನು ಸೀಳುವ ಸೆಲೆ ಮಿಂಚು. ಹೀಗೆಲ್ಲ ಶೃಂಗಾರಗೊಂಡ ಶಯ್ಯಾ ಗೃಹಕ್ಕೆ ಆಗಮಿಸುವ ವರುಣನ ಸಂಭ್ರಮ ಪ್ರತಿ ವರ್ಷವೂ ಸಂಭವಿಸುವುದು. ಅದಕ್ಕೆ ಕವಿ ಬೇಂದ್ರೆ,

ವರುಷಕೊಂದು ಹೊಸತು ಜನ್ಮ

ಹರುಷಕೊಂದು ಹೊಸತು ನೆಲೆಯು

ಅಖಿಲ ಜೀವಜಾತಕೆ

ಒಂದೆ ಒಂದು ಜನ್ಮದಲ್ಲಿ

ಒಂದೇ ಬಾಲ್ಯ ಒಂದೇ ಹರೆಯ

ನಮಗಷ್ಟೇ ಏತಕೆ?

ಎಂದು ‘ಯುಗಾದಿ’ ಕವನದಲ್ಲಿ ಪ್ರಶ್ನಿಸುತ್ತಾರೆ. ನಿಸರ್ಗದ ಅನೇಕ ಸದಸ್ಯರಲ್ಲಿ ಒಬ್ಬನಾದ ಸೂರ್ಯನಿಗೆ ವರುಷಪೂರ್ತಿ ಅವಿರತ ಕೆಲಸ. ಒಂದು ದಿನವೂ ರಜೆ ಹಾಕದ ಆತನಿಗೆ ಬೇಸಿಗೆಯಲ್ಲಿ ಒವರ್ ಟೈಮ್ ಡ್ಯೂಟಿ. ಆದ್ದರಿಂದ ಆಕಾಶ ಯಾವತ್ತಿಗಿಂತಲೂ ಹೆಚ್ಚು, ಬೆಳಕಿಗಿಂತ ಬೆಳ್ಳಗೆ ಹೊಳೆಯುತ್ತಲಿರುತ್ತದೆ.

ಹೀಗಿರುವಾಗ ಒಮ್ಮಿಂದೊಮ್ಮೆ ಕರ್ರಗೆ ಕಾರ್ವೇಡಗಳು ಗಂಟು ಮೂಟೆ ಕಟ್ಟಿಕೊಂಡು ನಿನ್ನ ಶಿಫ್ಟ್ ಮುಗೀತು ಮನೆಗೆ ಹೋಗು ಎಂಬಂತೆ ಸೂರ್ಯನನ್ನು ಮರೆ ಮಾಡಿದಾಗ ಭೂಮಿಯ ತುಂಬಾ ಅದೆಂಥದ್ದೋ ಸೊಗಡು. ಇನ್ನೊಂದು ‘ಕವಿ ಸಮಯ’ವೆನಿಸಿದರೂ ಚಾತಕ ಪಕ್ಷಿಯ ಬಗ್ಗೆ ಉಲ್ಲೇಖಿಸುವುದು ಅತ್ಯಂತ ಸೂಕ್ತ. ಮಳೆ ನೀರನ್ನು ಮಾತ್ರ ಕುಡಿದು ಬದುಕುವ ಜೀವಿ ಅದಾಗಿದ್ದು ಮಳೆ ಬರುವ ಸೂಚನೆ ಈ ಪಕ್ಷಿಗೆ ನಿಖರವಾಗಿ ಗೊತ್ತಿರುತ್ತದೆ. ಅದಕ್ಕಾಗಿಯೇ ಚಾತಕ ಪಕ್ಷಿಯನ್ನು ಮಾರುತಗಳ ಮುಂಗಾಮಿ ಎಂದು ಕರೆಯುವರು. ‘ಮಳೆ ಬರುವಾ ಹಾಗಿದೆ…’ ಎಂದು ಗುನುಗುನಿಸುವಂತೆ ಮುನ್ಸೂಚನೆ ಕೊಡುವ ಹಕ್ಕಿ ಇದಾದರೆ ಈ ವಾತಾವರಣದಲ್ಲಿ ಸೋಗೆಯ ಸೊಬಗೇ ಬೇರೆ. ಗಂಡು ನವಿಲು ತನ್ನ ಬಣ್ಣದ ಗರಿಗಳನ್ನು ಹರಡಿಕೊಂಡು ಕುಣಿದು ಕುಪ್ಪಳಿಸಿ ಹೆಣ್ಣು ನವಿಲನ್ನು ಓಲೈಸುವ, ಆಕರ್ಷಿಸುವ ಸಡಗರವು ಪ್ರಕೃತಿಯ ವೈಶಿಷ್ಟ್ಯವೇ ಸರಿ. ಜೀವ ಸೃಷ್ಟಿಗೆ ಇಡೀ ಭೂಮಿಯೇ ಹಸೆಮಣೆಯಾಗಿರುತ್ತದೆ. ಮಳೆ ಎಂಬುದು ಇಳೆಗಷ್ಟೆ ಅಲ್ಲ, ರೈತರಿಗೂ ಸಂಭ್ರಮ. ನೇಗಿಲು, ಗಳೆ, ಬಾರುಕೋಲುಗಳಿಗೆ ಎಣ್ಣೆ ನೀವಿ ಸಜ್ಜುಗೊಳಿಸಿ ಹೊಲವನ್ನು ನೇಗಿಲಿನಿಂದ ಶುದ್ಧಗೊಳಿಸಿ ಬಿತ್ತನೆಗೆ ಅಣಿಯಾಗಿಸುವ ಮುತುವರ್ಜಿ. ಬಿತ್ತಿದ ಬೀಜ ಮೊಳಕೆಯೊಡೆದು, ಸಸಿಯಾಗಿ, ಬೆಳೆಯಾಗಿ, ತೆನೆಯಾಗಿ, ಕಾಳಾಗಿ, ಅನ್ನವಾಗಿ, ಒಡಲು ಸೇರಿ ರಕ್ತವಾಗಿ ಶಕ್ತಿಯಾಗುವುದಕ್ಕೆ ಕಾರಣವೇ ಜೀವ ಚೈತನ್ಯವೆನಿಸಿದ ಈ ಮಳೆ. ಹಳ್ಳಿಗಳಲ್ಲಿ ಮನೆಗಳ ಹೆಂಚುಗಳನ್ನು ಸರಿಪಡಿಸಿ, ಸೋರದಂತೆ ಹುಲ್ಲು ಹಾಸಿ, ಸವಳು ಮಣ್ಣು ಮೆತ್ತಿ ಗಟ್ಟಿಗೊಳಿಸುವ ಸಿದ್ಧತೆ.

ಬೇಸಿಗೆಯಲ್ಲಿ ಮನುಷ್ಯರಿಗೇ ಕಾಟ ಕೊಟ್ಟು ಆಹಾರ ಸಂಗ್ರಹಿಸಿ ಮಳೆ ಬರುವ ಮುಂಚೆಯೇ ಗೂಡು ಸೇರಿಕೊಳ್ಳುವ ಇರುವೆಗಳ ದೂರದೃಷ್ಟಿ ಅತ್ಯಂತ ಜಾಣತನದ್ದು. ಶಾಲೆಗಳು ಆರಂಭವಾಗುವ ಸಮಯದಲ್ಲಿಯೇ ಮಳೆಗಾಲವನ್ನು ಸ್ವಾಗತಿಸುವ ಖುಷಿ. ಅಟ್ಟದಲ್ಲಿ ಕಾಲು ಮಡಚಿಕೊಂಡು ಕುಳಿತ ಕೊಡೆ ಮೈ ಕೊಡವಿ ಕೊಳ್ಳುವುದು ಈಗಷ್ಟೇ. ಮನೆಯ ಕೈತೋಟಕ್ಕೆ ಹೊಸ ಹೊಸ ಬಗೆಯ ಸಸಿ, ಗಿಡಗಳ ಆಗಮನ.

ಪ್ರತಿ ವರ್ಷ ಜೂನ್ ಏಳರಂದು ಮೃಗ ನಕ್ಷತ್ರದಲ್ಲಿ ಮಳೆ ಪ್ರವೇಶವಾಗುತ್ತದೆ ಎಂಬ ಜ್ಯೋತಿಷ್ಯದ ಪ್ರಕಾರ ‘ಮೃಗ ಪ್ರವೇಶ’ದ ಆಚರಣೆ ಸಂಪ್ರದಾಯಸ್ಥ ಮನೆಗಳಲ್ಲಿ ಉಂಟು. ಮಳೆಗಾಲವಿಡೀ ಬರುವ ಮಳೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗದಿರಲಿ ಎಂದು ಮನೆಗಳಲ್ಲಿ ಅಜ್ಜಿಯರು ಇಂಗು ಬೆಲ್ಲ ಕುಟ್ಟಿ ಪುಟ್ಟ ಪುಟ್ಟ ಗುಳಿಗೆ ಮಾಡಿ ಎಲ್ಲರಿಗೂ ತಿನ್ನಿಸುವ ಕಾಳಜಿ. ಅಷ್ಟಲ್ಲದೆ ನಾನಾ ಬಗೆಯ ಕಷಾಯ ಪುಡಿಗಳ ತಯಾರಿಕೆ. ಹೀಗೆ ವರ್ಷಾ ಕಾಲವನ್ನು ಸುರಕ್ಷಿತವಾಗಿ ಅನುಭವಿಸುವ ಏರ್ಪಾಡು ಮನೆ ಮನೆಗಳಲ್ಲಿ.

ಮೋಡಗಟ್ಟಿದ ಆಕಾಶ, ಮಳೆಯ ಆಗಮನದ ಸಂದೇಶ ಹರಡುವ ಓಲೆಕಾರನಂತೆ ಸುಯ್ಯನೆ ಸುತ್ತುತ್ತ ಮೂಗಿಗೆ ಅಡರುವ ತಂಗಾಳಿ. ಪಟಪಟನೆ ಬಡಿದುಕೊಳ್ಳುವ ಮನೆಯ ಬಾಗಿಲುಗಳನ್ನು ಭದ್ರಗೊಳಿಸಿ ಕಿಟಕಿಯ ಸರಳುಗಳಿಂದಾಚೆ ಕಣ್ಣು ಹಾಯಿಸಿ ಈ ಮಳೆಯ ಮೆರವಣಿಗೆಯನ್ನು ವೀಕ್ಷಿಸುವುದೆಂದರೆ ಕಣ್ಣಿಗೊಂದು ಕವಿತೆ ಮೆತ್ತಿದಂತೆ. ಹದಿಹರೆಯದ ಪೋರರಲ್ಲಿ ತಕಧಿಮಿತ. ಮಧುರ ಕುದಿತ. ಅಮ್ಮ ತಯಾರಿಸಿದ ಬಿಸಿಬಿಸಿ ಬೋಂಡಾ, ಭಜ್ಜಿ ಸವಿಯುತ್ತಾ ಅಂಗಳದಲ್ಲಿ ಕಣ್ಣಿಟ್ಟು ಮಳೆ ಬಂದು ನಿಂತ ಮೇಲೆ ಮೂಡುವ ಕಾಮನ ಬಿಲ್ಲಿನ ಬೆಡಗಿನಲ್ಲಿ ಪ್ರಿಯತಮ/ ಪ್ರಿಯತಮೆಯನ್ನು ಸಂಧಿಸುವ ಹುನ್ನಾರ ಹರಳು ಕಟ್ಟುವುದು. ಈ ಕ್ಷಣದಲ್ಲಿಯೇ ಕಾಳಿದಾಸ, ಬೇಂದ್ರೆ, ಮೇಘದೂತ, ಯಕ್ಷ -ಯಕ್ಷಿಯರ ನೆನಪುಗಳ ಒತ್ತುವರಿ.

ಪಶು ಪಕ್ಷಿ ಮಾನವಾದಿಗಳ ಒಟ್ಟೂ ಭಾವ, ಸಡಗರ, ಗೊಡವೆ, ಪಡಿಪಾಟಲುಗಳು ಇದಾದರೆ ಮಳೆರಾಯನ ಉದ್ದೇಶ ಘನ ಗಾಂಭೀರ್ಯ ಉಳ್ಳದ್ದು. ಆತನಿಗೋ ಇಡೀ ಭೂಮಂಡಲವನ್ನು ಪೋಷಿಸುವ ಜವಾಬ್ದಾರಿ. ಪ್ರತಿ ಜೀವಿಗಳಿಗೆ ಅನ್ನವಿಕ್ಕುವ ಸಂಕಲ್ಪ. ಒಳ್ಳೆಯ ಕಾರ್ಯ, ಉದ್ದೇಶಕ್ಕೆ ಇರುವ ಸೌಂದರ್ಯ ಅಗಾಧವಾದುದು. ಆದ್ದರಿಂದ ಮಳೆ ಎಂಬುದು ಒಂದು ಸುಂದರ ತೇರು. ಅದನ್ನೆಳೆಯುವ ಪ್ರತಿ ಕ್ಷಣವೂ ಅಮೃತಗಳಿಗೆ. ಗಾಳಿ, ಮಿಂಚು, ಗುಡುಗು ಮುಂತಾದವುಗಳು ಆ ತೇರಿನ ಗಾಲಿಗಳು. ಈ ತೇರನ್ನೆಳೆಯಬೇಕಾದವರು ಮಾತ್ರ ಮನುಷ್ಯರು. ನಿಸರ್ಗ ರಕ್ಷಣೆಯ ಪ್ರಜ್ಞೆಯಲ್ಲಿ ಮಾತ್ರ ಈ ತೇರನ್ನೆಳೆದರೆ ಇದಕ್ಕೆ ಅದ್ಭುತ ವೇಗ, ಸಮೃದ್ಧಿ. ‘ಮಗ ಉಂಡರೆ ಕೆಟ್ಟಲ್ಲ, ಮಳೆ ಬಂದರೆ ಕೆಟ್ಟಲ್ಲ’ ಎಂಬ ನಾಣ್ಣುಡಿಯ ಸಾಕ್ಷಾತ್ಕಾರ.

Leave a Reply

Your email address will not be published. Required fields are marked *