ಪುತ್ತೂರು ಗ್ರಾಮಾಂತರ: ನಿಡ್ಪಳ್ಳಿ ಗ್ರಾಮದ ಕುಕ್ಕುಪುಣಿ ಸಮೀಪದ ಪಟ್ಟೆ ಎಂಬಲ್ಲಿ ಬುಧವಾರ ಸಿಡಿಲು ಬಡಿದು ಮನೆ, ಬಚ್ಚಲು ಮನೆಗೆ(ಸ್ನಾನ ಗೃಹ) ಹಾನಿಯಾಗಿದೆ.
ನಿಡ್ಪಳ್ಳಿ ಗ್ರಾಮದ ಪಟ್ಟೆ ನಿವಾಸಿ ರಾಮಣ್ಣ ಪೂಜಾರಿ ಅವರ ಮನೆ ಹಿಂಭಾಗದಲ್ಲಿರುವ ಬಚ್ಚಲು ಮನೆಗೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮ ಬಚ್ಚಲು ಮನೆಯ ಮಾಡಿನ ಶೀಟ್ ಸಂಪೂರ್ಣ ನಾಶಗೊಂಡಿದ್ದು, ಗೋಡೆ, ಪಾತ್ರೆಗಳಿಗೆ ಹಾನಿಯಾಗಿದೆ. ಮನೆಯ ಗೋಡೆ ಬಿರುಕು ಬಿಟ್ಟು ಛಾವಣಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕದ ವಯರಿಂಗ್ ವ್ಯವಸ್ಥೆ, ಸ್ವಿಚ್ ಬೋರ್ಡ್ ಸಂಪೂರ್ಣವಾಗಿ ಹಾನಿಗೊಂಡಿದೆ. ಮನೆ ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಸಿಡಿಲಿನ ಅಘಾತಕ್ಕೆ ಪಟ್ಟೆ ಸುತ್ತಮುತ್ತಲಿನ ಕೆಲವು ಮಂದಿಯ ಪಂಪ್ ಶೆಡ್, ಮನೆಯ ವಯರಿಂಗ್ ವ್ಯವಸ್ಥೆಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನಿಡ್ಪಳ್ಳಿ ಪಿಡಿಒ ಸಂಧ್ಯಾಲಕ್ಷ್ಮೀ, ಕಾರ್ಯದರ್ಶಿ ಶಿವರಾಮ್, ಪಂಚಾಯಿತಿ ಸದಸ್ಯರಾದ ಅವಿನಾಶ್ ರೈ, ತುಳಸಿ, ಪಂಚಾಯಿತಿ ಸಿಬ್ಬಂದಿ ವಿನೀತ್ ಕುಮಾರ್, ಜಯಕುಮಾರಿ, ಗ್ರಾಮ ಆಡಳಿತಾಧಿಕಾರಿ, ಕಚೇರಿ ಸಹಾಯಕಿ ಜಯಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಕ್ಕಿನ ಸೇತುವೆಯಲ್ಲಿ ಸಂಚಾರ ನಿರ್ಬಂಧ: ಶಿಥಿಲಗೊಂಡ ಪಾಣೆಮಂಗಳೂರು ಸಂಕ : ತಹಸೀಲ್ದಾರ್ ಅರ್ಚನಾ ಸೂಚನೆ