ಮಳೆ ಮುಂದುವರಿಕೆ, ನದಿಗಳು ಭರ್ತಿ, ಜನಜೀವನ ಅಸ್ತವ್ಯಸ್ತ

ಚಿಕ್ಕೋಡಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಲಾನಯನ ಪ್ರದೇಶಗಳಲ್ಲಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಿದೆ. ಚಿಕ್ಕೋಡಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ , ವೇದಗಂಗಾ ಹಾಗೂ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಹಂತದ 8 ಸೇತುವೆಗಳಲ್ಲಿ 4 ಸೇತುವೆಗಳು ಬುಧವಾರ ಬೆಳಗಿನ ಜಾವದಿಂದ ಜಲಾವೃತಗೊಂಡಿವೆ.
ದೂಧಗಂಗಾ ಹಾಗೂ ವೇದಗಂಗಾ ನದಿಗಳ ನೀರಿನ ಮಟ್ಟ ಸುಮಾರು 2 ಅಡಿಯಷ್ಟು ಹೆಚ್ಚಿದೆ. ಕೃಷ್ಣಾ ನದಿಯ ನೀರಿನ ಮಟ್ಟದಲ್ಲೂ ಏರುಪೇರು ಇದೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನುರ ಸೇತುವೆ ದೂಧಗಂಗಾ ನದಿಗೆ ಇರುವ ಮಲಿಕವಾಡ-ದತ್ತವಾಡ ಹಾಗೂ ದೂಧಗಂಗಾ,ವೇದಗಂಗಾ ನದಿ ಸಂಗಮದ ಬಳಿ ಇರುವ ಕಾರದಗಾ-ಭೋಜ ಸೇತುವೆ ಜಲಾವೃತ ಗೊಂಡಿವೆ. ನದಿ ತೀರದ ರೈತರು ಸುತ್ತುವರಿದು ಪ್ರಯಾಣ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಹಾಗೂ ಚಿಕ್ಕೋಡಿ ತಾಲೂಕಿನ ನದಿ ತೀರದಲ್ಲಿ ಮಳೆಯ ಪ್ರಮಾಣ ಮಂಗಳವಾರ ಸಂಜೆಯಿಂದ ಹೆಚ್ಚಾಗಿದೆ. ಉಪನದಿಗಳಾದ ದೂಧಗಂಗಾ ಹಾಗೂ ವೇದಗಂಗಾ ನದಿಗಳ ನೀರಿನ ಹರಿವು ಸಹ ಹೆಚ್ಚಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಅನಾಹುತಗಳು ಆಗುವುದಿಲ್ಲ. ಪರ್ಯಾಯ ರಸ್ತೆ ಮಾರ್ಗಗಳಿರುವುದರಿಂದ ಸಂಚಾರಕ್ಕೂ ತೊಂದರೆಯಾವುದಿಲ್ಲ ಎಂದು ತಹಸೀಲ್ದಾರ ಸಿ.ಜಿ.ಕುಲಕರ್ಣಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಮಳೆ ವಿವರ : ಕೋಯ್ನ 86 ಮಿ.ಮೀ, ನವಜಾ 79 ಮಿ.ಮೀ, ವಾರಣಾ 33 ಮಿ.ಮೀ,ಮಹಾಬಳೇಶ್ವರ 110 ಮಿ.ಮೀ,ರಾಧಾನಗರ 80 ಮಿ.ಮೀ,ಪಾಟಗಾಂವ 170 ಮಿ.ಮೀ ಹಾಗೂ ಕಾಳಮ್ಮವಾಡಿ ಪ್ರದೇಶದಲ್ಲಿ 67 ಮಿ.ಮೀ ಮಳೆಯಾಗಿದೆ.
ಚಿಕ್ಕೋಡಿ ತಾಲೂಕಿನಲ್ಲಿ ಮಳೆ ಪ್ರಮಾಣ ನದಿ ತೀರದ ಸದಲಗಾ ಪರಿಸರದಲ್ಲಿ 9.2 ಮಿ.ಮೀ ದಾಖಲಾಗಿದೆ.

ದೂಧಗಂಗಾ ನದಿಯಿಂದ 16,192 ಕ್ಯೂಸೆಕ್, ರಾಜಾಪುರ ಬ್ಯಾರೇಜದಿಂದ 52,227 ಕ್ಯೂಸೆಕ್ ಈ ರೀತಿಯಾಗಿ 68,419 ಕ್ಯೂಸೆಕ್ ನೀರು ಕೃಷ್ಣಾಗೆ ಬರುತ್ತಿದೆ. ಹಿಪ್ಪಾರಗಿ ಬ್ಯಾರೇಜ್‌ನಿಂದ 53,100 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ. ಪ್ರಬಾಹ ಬರುವುದಿಲ್ಲ. ಪ್ರವಾ ಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ, ನದಿ ತೀರದ ಜನ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ತಹಸೀಲ್ದಾರ ಸಿ.ಎಸ್.ಕುಲಕರ್ಣಿ ತಿಳಿಸಿದರು.