ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರಿಗೆ ತಂಪೆರೆದ ವರುಣ

ಬಾಳೆಹೊನ್ನೂರು: ಬಿರು ಬಿಸಿಲಿಂದ ಕಂಗೆಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಗುಡುಗು, ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆ ವಾತಾವರಣವನ್ನು ಕೊಂಚ ತಂಪಾಗಿಸಿದೆ. ಆದರೆ ಕಾಫಿ, ಕಾಳುಮೆಣಸು ಬೆಳೆಗಾರರಲ್ಲಿ ಆತಂಕ ತಂದೊಡ್ಡಿದೆ.

ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪ, ಕಳಸ ಭಾಗದಲ್ಲಿ ಮಳೆಯಾಗಿದೆ. ಕೊಪ್ಪ ಸುತ್ತ ಮುತ್ತ ಗುಡುಗು ಸಿಡಿಲು ಸಹಿತ ಗಾಳಿ ಮಳೆಯಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಇದು ಈ ವರ್ಷದ ಎರಡನೇ ಮಳೆ. ಬಾಳೆಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ ಆಲಿಕಲ್ಲು ಮಳೆಯಾಗಿದೆ. ಪಟ್ಟಣ ಪ್ರದೇಶದಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಮಳೆ ಆರಂಭಗೊಂಡರೆ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಆನಂತರ ಶುರುವಾದ ಧಾರಾಕಾರ ಮಳೆ ಸಂಜೆ 4.30ರವರೆಗೆ ನಿರಂತರ ಸುರಿದಿದೆ.

ಹಿಂದೆಂದೂ ಬಾರದಷ್ಟು ಪ್ರಮಾಣದಲ್ಲಿ ಆಲಿಕಲ್ಲು ಮಳೆಯಾಗಿದೆ. ತೋಟ, ಮನೆಗಳ ಎದುರು ರಾಶಿಗಟ್ಟಲೇ ಬಿದ್ದಿವೆ. ಆಲಿಕಲ್ಲು ಬಿದ್ದ ರಭಸಕ್ಕೆ ಹಲವೆಡೆ ಕಾಫಿ ತೋಟಗಳಲ್ಲಿ ಕಾಫಿಗಿಡದ ಎಲೆಗಳು ಸಂಪೂರ್ಣ ಉದುರಿವೆ. ಇದರಿಂದ ಕಾಫಿ ಬೆಳೆಗೆ ತೀವ್ರ ಹಾನಿಯಾಗಿದೆ.

ಧಾರಾಕಾರ ಮಳೆಯಿಂದ ಪಟ್ಟಣದಲ್ಲಿ ನಡೆಯುತ್ತಿರುವ ಬಾಕ್ಸ್ ಚರಂಡಿ, ರಸ್ತೆ ವಿಸ್ತರಣೆಯ ಕಾಮಗಾರಿಗೆ ತೊಂದರೆಯಾಗಿದೆ. ಚರಂಡಿ ಹಾಗೂ ರಸ್ತೆಗಳಲ್ಲಿ ಕೆಂಪುಮಣ್ಣು ಮಿಶ್ರಿತ ನೀರು ರಸ್ತೆಯಲ್ಲಿ ಹರಿದು ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗಿತ್ತು. ರಂಭಾಪುರಿ ಮಠ, ಮೆಣಸುಕೊಡಿಗೆ, ಕಡ್ಲೇಮಕ್ಕಿ, ವಾಟುಕೊಡಿಗೆ, ಅರಳೀಕೊಪ್ಪ, ಹೇರೂರು, ಮುದುಗುಣಿ, ಸಿಆರ್​ಎಸ್, ಕಡಬಗೆರೆ ಮುಂತಾದೆಡೆ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ.

ಕಾಫಿ, ಕಾಳುಮೆಣಸಿಗೆ ಹಾನಿ: ಕೆಲ ದಿನಗಳ ಹಿಂದಷ್ಟೇ ಸುರಿದ ಉತ್ತಮ ಮಳೆಗೆ ಕಾಫಿ ಗಿಡಗಳಲ್ಲಿ ಹೂ ಬಂದು ಕಾಯಿಕಟ್ಟುವಿಕೆಯ ಪ್ರಕ್ರಿಯೆ ಆರಂಭಗೊಂಡಿದೆ. ಇದೀಗ ಆಲಿಕಲ್ಲು ಮಳೆಯಿಂದ ಕಾಯಿ ಕಟ್ಟುವಿಕೆಗೆ ಹಾನಿಯಾಗಿದೆ. ಆಲಿಕಲ್ಲು ಬಿದ್ದ ಕಾಳುಮೆಣಸು ಗಿಡಗಳು ಕೊಳೆಯಲು ಆರಂಭಿಸುತ್ತವೆ. ಅಲ್ಲದೆ ಇತರೆ ತೋಟಗಾರಿಕಾ ಬೆಳೆಗಳಿಗೂ ಹಾನಿ ಉಂಟಾಗಿದೆ. ನಾನು ಹುಟ್ಟಿದಾಗಿನಿಂದಲೂ ಇಂತಹ ಪ್ರಮಾಣದ ಆಲಿಕಲ್ಲು ಮಳೆ ನೋಡಿರಲಿಲ್ಲ. ಈ ಪ್ರಮಾಣದ ಮಳೆಯಿಂದ ಕಾಫಿಗಿಡಗಳಿಗೆ ಅಪಾರ ಹಾನಿಯಾಗಿದೆ. ಮುಂದಿನ ವರ್ಷ ಫಸಲಿನ ಪ್ರಮಾಣ ಕುಂಠಿತವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಪಟ್ಟಣ ಸಮೀಪದ 70 ವರ್ಷದ ಕಾಫಿ ಬೆಳೆಗಾರ ನಾಗರಾಜಯ್ಯ.