ರೈತರಿಗೆ ಸಂಕಷ್ಟ ತಂದಿಟ್ಟ ಮಳೆ

ಗುಂಡ್ಲುಪೇಟೆ: ಇಪ್ಪತ್ತು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆ ತಾಲೂಕಿನ ಅನ್ನದಾತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಮಳೆಯಿಲ್ಲದೆ ಬಾಡುತ್ತಿದ್ದ ಸೂರ್ಯಕಾಂತಿ, ಜೋಳ, ಹತ್ತಿ ಮುಂತಾದ ಬೆಳೆಗಳಿಗೆ ಈ ಮಳೆ ಅನುಕೂಲವಾಗಿದ್ದರೂ ಎಡೆ ಬಿಡದೆ ಸುರಿಯುತ್ತಿರುವುದರಿಂದಾಗಿ ಮಳೆಯಾಶ್ರಿತ ಬೆಳೆಗಳ ಜತೆಗೆ ಕಟಾವಿಗೆ ಬಂದಿರುವ ನೀರಾವರಿ ಬೆಳೆಗಳೂ ರೈತರ ಕೈಹತ್ತದಂತಾಗಿವೆ. ನಿರಂತರ ಮಳೆಯಿಂದಾಗಿ ಸದ್ಯ ಕಟಾವಿಗೆ ಬಂದಿರುವ ಸಣ್ಣ ಈರುಳ್ಳಿ ಕೀಳಲು ಸಾಧ್ಯವಾಗದಂತಾಗಿದ್ದು ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕುತ್ತಿರುವ ಟೊಮ್ಯಾಟೊಗೆ ರೋಗಬಾಧೆ ಆವರಿಸುವ ಭೀತಿ ಎದುರಾಗಿದೆ.

ಸತತವಾಗಿ ಬೀಳುತ್ತಿರುವ ಮಳೆಯಿಂದ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳ ನಡುವೆ ಬೆಳೆದಿರುವ ಕಳೆ ಕೀಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಹತ್ತಿ ಸೇರಿದಂತೆ ಎಲ್ಲ ಬೆಳೆಗಳೂ ಕಳೆಗಳಿಂದ ಆವೃತವಾಗಿವೆ. ಮುಂಗಾರಿನಲ್ಲಿ ಬಿತ್ತನೆ ಮಾಡಿ ಇದೀಗ ಕಾಳುಕಟ್ಟುವ ಹಂತದಲ್ಲಿದ್ದ ಸೂರ್ಯಕಾಂತಿ ಹಾಗೂ ಜೋಳ ಹುಲುಸಾಗಿ ಬೆಳೆದಿದ್ದರೂ ಕಾಳುಗಳು ಜಳ್ಳಾಗುವ ಭೀತಿ ಎದುರಾಗಿದೆ.

ಜಾನುವಾರುಗಳಿಗೆ ಮೇವು ಪೂರೈಕೆ ಸವಾಲು: ಮಳೆ ಹಾಗೂ ಅಂತರ್ಜಲ ಕೊರತೆಯಿಂದ ತಾಲೂಕಿನಲ್ಲಿ ಹೆಚ್ಚಿನ ರೈತರು ಹೈನುಗಾರಿಕೆಯನ್ನೇ ಅವಲಂಬಿಸುತ್ತಿದ್ದಾರೆ. ಆದರೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರು ತಮ್ಮ ಜಾನುವಾರುಗಳನ್ನು ಹೊರಗೆ ಬಿಡಲು ಸಾಧ್ಯವಾಗದಂತಾಗಿದ್ದು ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮೇವು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಣ ಮೇವಿನ ಕೊರತೆಯಿಂದ ಹಸಿ ಮೇವನ್ನೇ ತಿನ್ನುತ್ತಿರುವ ಪರಿಣಾಮ ಜಾನುವಾರುಗಳಿಗೆ ಬೇಧಿ ಶುರುವಾಗಿದೆ. ಜಮೀನುಗಳಿಗೆ ತೆರಳಿ ಮೇವು ತರಲೂ ಅವಕಾಶ ದೊರಕದ ಪರಿಣಾಮ ಎಲ್ಲ ರಾಸುಗಳಿಗೂ ಮೇವು ಪೂರೈಸುವುದು ಭಾರಿ ಸವಾಲಾಗಿ ಪರಿಣಮಿಸಿದೆ.

ಸರ್ವನಾಶವಾದ ಸಣ್ಣ ಈರುಳ್ಳಿ: ನಿರಂತರ ಮಳೆಯಿಂದ ಕಟಾವು ಹಂತಕ್ಕೆ ಬಂದಿದ್ದ ಸಣ್ಣ ಈರುಳ್ಳಿಯನ್ನು ಕೀಳಲು ಸಾಧ್ಯವಾಗದ ಕಾರಣ ಭೂಮಿಯಲ್ಲೇ ಕೊಳೆಯುತ್ತಿದೆ. ಭಿತ್ತನೆ ಹಾಗೂ ಬೆಳೆಯಲು ಮಾಡಿದ್ದಷ್ಟೇ ಖರ್ಚು ಮಾಡಿ ಕೀಳಿಸಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ.

ತಾಲೂಕಿನ ಬಹುತೇಕ ರೈತರು 60 ದಿನಗಳ ಅಲ್ಪಾವಧಿ ಬೆಳೆಯಾದ ಸಣ್ಣ ಈರುಳ್ಳಿಯನ್ನು ಬೆಳೆಯುತ್ತ ಬಂದಿದ್ದಾರೆ. ಒಮ್ಮೊಮ್ಮೆ ಉತ್ತಮ ಬೆಲೆ ಸಿಕ್ಕಿ ಲಾಭ ಪಡೆದರೆ ಹಲವಾರು ಬಾರಿ ಬೆಲೆ ಕುಸಿತದಿಂದ ಕೈಸುಟ್ಟುಕೊಳ್ಳುತ್ತಿದ್ದರೂ ಈ ಬಾರಿ ತಾಲೂಕಿನ ಅತಿ ಹೆಚ್ಚು ರೈತರು ತಮ್ಮ ಜಮೀನುಗಳಲ್ಲಿ ಅರಿಶಿಣ ಬೆಳೆ ಜತೆಗೆ ಸಣ್ಣ ಈರುಳ್ಳಿಯನ್ನೂ ಮಿಶ್ರಬೆಳೆಯಾಗಿ ನಾಟಿ ಮಾಡಿದ್ದರು.

ಏಪ್ರಿಲ್ ಮತ್ತು ಮೇನಲ್ಲಿ ಬಿತ್ತನೆ ಮಾಡಿದ್ದ ಸಣ್ಣ ಈರುಳ್ಳಿ ಕ್ವಿಂಟಾಲ್‌ಗೆ 2.5 ರಿಂದ 6,000 ರೂ.ವರೆಗೆ ಖರೀದಿಸಲಾಗುತ್ತಿತ್ತು. ಆದರೆ ಮೋಡಕವಿದ ವಾತಾವರಣ ಹಾಗೂ ಇದ್ದಕ್ಕಿದ್ದಂತೆ ಬೀಳುವ ಮಳೆ ಈರುಳ್ಳಿ ಬೆಳೆ ಕಟಾವಿಗೆ ಅಡಚಣೆಯಾಗಿದೆ. ಈ ಬಾರಿ ಯಾವುದೇ ರೋಗರುಜಿನಗಳಿಲ್ಲದೆ ಚೆನ್ನಾಗಿ ಬೆಳೆದಿದ್ದ ಈರುಳ್ಳಿಯನ್ನು ಮುಂದಾಗಿ ಕಟಾವು ಮಾಡಿದ ರೈತರಿಗೆ ಕ್ವಿಂಟಾಲ್‌ಗೆ 6 ರಿಂದ 6,500 ರೂ.ಗೆ ಮಾರಾಟವಾಗುವ ಮೂಲಕ ಲಾಭದಾಯಕವಾಗಿತ್ತು. ಆದರೆ ಜೂನ್ ಅಂತ್ಯದಲ್ಲಿ ಬೀಳಲಾರಂಭಿಸಿದ ಮಳೆ ಸ್ವಲ್ಪವೂ ಬಿಡುವು ಕೊಡದ ಪರಿಣಾಮ ಕಟಾವು ಸಾಧ್ಯವಾಗದಂತೆ ಮಾಡಿದ್ದು ಭೂಮಿಯಲ್ಲಿಯೇ ಕೊಳೆಯುತ್ತಿದೆ. ಕೊಳೆತಿರುವ ಈರುಳ್ಳಿಯನ್ನು ಭೂಮಿಯಿಂದ ಕಿತ್ತೊಗೆಯಲು ಬಿತ್ತನೆಗೆ ಮಾಡಿದಷ್ಟೇ ಖರ್ಚು ಮಾಡಬೇಕಾಗಿದೆ. ಇದು ಬೆಳೆಗಾರರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಈ ಬಾರಿಯ ಪುಷ್ಯ ಮಳೆ ಸ್ವಾತಿ ಮಳೆಗಿಂತಲೂ ಹೆಚ್ಚಾಗಿ ಬಿದ್ದ ಪರಿಣಾಮ ಎಲ್ಲ ರೈತರು ನಷ್ಟ ಅನುಭವಿಸುವಂತಾಗಿದೆ. ಕಳೆದ ವರ್ಷ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ ಮಳೆ ಈ ಬಾರಿ ಅತಿ ಹೆಚ್ಚು ಬೀಳುವ ಮೂಲಕ ಮತ್ತಷ್ಟು ತೊಂದರೆಯುಂಟು ಮಾಡಿದೆ.
ಬಂಡೀಪುರ ಕಾಡಂಚಿನ ಗೋಪಾಲಪುರ, ಬೇರಂಬಾಡಿ ಮುಂತಾದ ಪ್ರದೇಶಗಳಲ್ಲಿ ತೇವಾಂಶ ಹೆಚ್ಚಳದಿಂದ ಬಾಳೆ ಇಳುವರಿ ಮೇಲೂ ಪರಿಣಾಮ ಬೀರುತ್ತಿದೆ. ಮುಂಚಿತವಾಗಿ ಬಿತ್ತನೆ ಮಾಡಿದ ಅರಿಶಿಣ ಬೆಳೆಯೂ ತೇವಾಂಶ ಹೆಚ್ಚಳದಿಂದ ಕೊಳೆಯುವ ಭೀತಿ ಎದುರಾಗಿದ್ದರೆ ಸದ್ಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತಿರುವ ಕೋಸು ಮತ್ತು ಟೊಮ್ಯಾಟೊಗೆ ಕ್ರಿಮಿನಾಶಕ ಸಿಂಪಡಿಸಿದರೂ ಮಳೆ ಬೀಳುತ್ತಿರುವುದರಿಂದ ಕಪ್ಪಾಗುತ್ತಿವೆ. ಜತೆಗೆ ಕೊಳೆರೋಗದ ಬಾಧೆಗೊಳಗಾಗುತ್ತಿವೆ. ಮಂಗಳೂರು ಸೌತೆ ಶೀತಬಾಧೆಯಿಂದ ಹಳದಿ ಬಣ್ಣಕ್ಕೆ ತಿರುಗಿ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಳ್ಳುತ್ತಿದೆ.

ಈ ಬಾರಿ ಮಳೆಯಿಂದ ಈರುಳ್ಳಿ ಬೆಳೆಯನ್ನು ಪಾರು ಮಾಡಲು ರೈತರು ಶಾಮಿಯಾನ ಹಾಕಿಸಿಕೊಂಡು ಕಟಾವು ಮಾಡಿಸುತ್ತಿದ್ದರು. ಆದರೆ ಎಡೆಬಿಡದೆ ಸುರಿವ ಮಳೆಯಿಂದ ಕ್ವಿಂಟಾಲ್ ಈರುಳ್ಳಿಯನ್ನು 500 ರೂ.ಗೂ ಕೇಳುವವರಿಲ್ಲದಂತಾಗಿದೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಮಾಧು ರೈತ ಮುಖಂಡ, ಹಂಗಳ ಗ್ರಾಮ

ಅರಿಶಿಣ ಬೆಳೆ ಜತೆ ಸಣ್ಣ ಈರುಳ್ಳಿಯನ್ನೂ ಬೆಳೆಯುವುದರಿಂದ ತಾಲೂಕಿನಲ್ಲಿ ಸುಮಾರು 1200ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಎಲ್ಲಿಯೂ ರೋಗಬಾಧೆ ಕಾಣಿಸದೆ ಉತ್ತಮ ಇಳುವರಿಯೂ ಬಂದಿದೆ. ಮುಂದಾಗಿ ಬಿತ್ತನೆ ಮಾಡಿದ್ದ ರೈತರು ಬೇಗನೆ ಕಟಾವು ಮಾಡಿ ಮಾರಿದ್ದರಿಂದ ಸ್ವಲ್ಪ ಲಾಭಗಳಿಸಿದ್ದಾರೆ. ಆದರೆ ನಿರಂತರ ಮಳೆಯಿಂದ ಕಟಾವು ಸಾಧ್ಯವಾಗದೆ ಬೆಳೆ ಕೊಳೆಯುತ್ತಿದ್ದು ಬೆಳೆಗಾರಿಗೆ ನಷ್ಟವುಂಟಾಗುತ್ತಿದೆ.
ಭಾಸ್ಕರ್ ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಹಾಲುಕೊಡುವ ಹಸುಗಳನ್ನು ಮೇಯಿಸಲು ಜಮೀನುಗಳಿಗೆ ಕರೆದೊಯ್ದರೆ ತೇವಾಂಶವಿರುವ ಭೂಮಿಯನ್ನು ತುಳಿಯುವುದರಿಂದ ಬೆಳೆ ಹಾನಿಯಾಗುತ್ತದೆ. ಸರ್ಕಾರಿ ಭೂಮಿ ಹಾಗೂ ಗೋಮಾಳಗಳ ಒತ್ತುವರಿಯಿಂದ ಜಾನುವಾರುಗಳ ಮೇವಿಗೆ ಕೊರತೆಯಾಗುತ್ತಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ರಾಸುಗಳಿಗೆ ಮೇವು ಪೂರೈಸುವುದು ದುಬಾರಿಯಾಗುತ್ತಿದೆ. ಕಳೆದ ವರ್ಷ ಮಳೆಬೀಳದೆ ಮೇವಿನ ಸಂಗ್ರಹವೂ ಇಲ್ಲದಂತಾಗಿತ್ತು. ಯಾವಾಗಲೂ ಹಸಿ ಮೇವು ತಿನ್ನುವ ಹಸು ಮತ್ತು ಕರುಗಳಿಗೆ ಬೇಧಿ ಆರಂಭವಾಗಿದ್ದು ಇವುಗಳನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗಿದೆ.
ಸುರೇಶ್ ರೈತ, ರಂಗೂಪುರ ಗ್ರಾಮ

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…