ಹಳಿ ಮೇಲೆ ಮರಣಮೃದಂಗ

|ಅವಿನಾಶ ಮೂಡಂಬಿಕಾನ

ಬೆಂಗಳೂರು: ಬುಲೆಟ್ ರೈಲು, ಇಂಜಿನ್​ರಹಿತ ಅತ್ಯಾಧುನಿಕ ಹೈಸ್ಪೀಡ್ ರೈಲುಗಳನ್ನು ಅಭಿವೃದ್ಧಿಪಡಿಸುವ ಮೂಲಕ ರೈಲ್ವೆ ಇಲಾಖೆ ಹೈಟೆಕ್ ಸ್ಪರ್ಶ ಪಡೆದುಕೊಳ್ಳುತ್ತಿದ್ದರೂ, ಹಳಿಗಳ ಮೇಲೆ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇತ್ತೀಚೆಗೆ ಅಮೃತಸರದಲ್ಲಿ ರಾಮಲೀಲಾ ವೀಕ್ಷಿಸುತ್ತಿದ್ದ ವೇಳೆ ರೈಲು ಹರಿದು 60ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆ ರೈಲ್ವೆ ಸುರಕ್ಷತೆ ಕುರಿತು ವ್ಯಾಪಕ ಚರ್ಚೆ ಹುಟ್ಟುಹಾಕಿತ್ತು. ಈ ಬೆನ್ನಲ್ಲೇ ಕರ್ನಾಟಕದಲ್ಲೂ ಪ್ರತಿದಿನ ಸರಾಸರಿ ನಾಲ್ವರು (ಆತ್ಮಹತ್ಯೆ ಹೊರತುಪಡಿಸಿ) ರೈಲ್ವೆ ಹಳಿಗಳ ಮೇಲೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಕಳೆದ 6

ವರ್ಷದಲ್ಲಿ ರೈಲ್ವೆ ಅಪಘಾತಕ್ಕೆ 4,595 ಮಂದಿ ಮೃತಪಟ್ಟಿದ್ದಾರೆ. ತಿಂಗಳಿಗೆ 120-130 ಮಂದಿ ಮೃತಪಡುತ್ತಿದ್ದಾರೆ. ಹಳಿ ಮತ್ತು ಸಿಗ್ನಲ್ ದಾಟುವ ವೇಳೆ ರೈಲಿಗೆ ಸಿಲುಕಿ 2016ರಲ್ಲಿ 743 ಜನ, 2017ರಲ್ಲಿ 654, 2018 ಸೆಫ್ಟೆಂಬರ್​ವರೆಗೆ 487 ಮಂದಿ ಮೃತಪಟ್ಟಿದ್ದಾರೆ.

ಉಗ್ರ ಕೃತ್ಯಕ್ಕೆ ಸುಲಭ ತುತ್ತು

ಸುರಕ್ಷತಾ ಕ್ರಮಗಳ ಕೊರತೆ ಹಿನ್ನೆಲೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ವಿವಿಧ ತಂತ್ರಗಳನ್ನು ರೂಪಿಸುತ್ತಿರುವ ಉಗ್ರರಿಗೆ ರೈಲ್ವೆ ಹಳಿ ಸುಲಭದ ಟಾರ್ಗೆಟ್ ಆಗಿದೆ. ಹಳಿಯನ್ನು ಹಾನಿಗೊಳಿಸಿ ರೈಲು ಅಪಘಾತ ಆಗುವಂತೆ ಮಾಡಿ ನೂರಾರು ಜನರ ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆಯಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ರೈಲು ಅಪಘಾತ ವೇಳೆ ಇಂಥದೆ ಆರೋಪ ಕೇಳಿಬಂದಿತ್ತು.

ಮೃತರಿಗೆ ಪರಿಹಾರವೂ ಸಿಗಲ್ಲ

ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ರೈಲ್ವೆ ಇಲಾಖೆ ತಪ್ಪಿನಿಂದ ಮೃತಪಟ್ಟರೆ ಮಾತ್ರ ಪರಿಹಾರ ನೀಡಲಾಗುತ್ತದೆ. ರೈಲು ಬೋಗಿಯಿಂದ ಬಿದ್ದು ಮೃತಪಡುವುದು ಅಥವಾ ನಿಲ್ದಾಣದಲ್ಲಿ ಅನಾಹುತವಾಗಿ ಮೃತಪಟ್ಟರೆ ಮಾತ್ರ ಇಲಾಖೆ ಪರಿಹಾರ ಕೊಡುತ್ತದೆ.

ಎಲ್ಲೆಂದರಲ್ಲಿ ಹಳಿ ದಾಟಿದರೆ ಜೈಲು!

2017ರಲ್ಲಿ ನಿಯಮಬಾಹಿರವಾಗಿ ಎಲ್ಲೆಂದರಲ್ಲಿ ಹಳಿ ದಾಟುತ್ತಿದ್ದ 2,150 ಜನರನ್ನು ಬಂಧಿಸಿರುವ ನೈಋತ್ಯ ರೈಲ್ವೆ ಆರ್​ಪಿಎಫ್ ಸಿಬ್ಬಂದಿ 8.41 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. 2018ರಲ್ಲಿ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ 1557 ಜನರ ಬಂಧಿಸಿ, 4.97 ಲಕ್ಷ ರೂ. ದಂಡ ವಿಧಿಸಿದೆ. ತಪ್ಪಿತಸ್ಥರಿಗೆ 6 ತಿಂಗಳು ಜೈಲು ಮತ್ತು 1 ಸಾವಿರ ರೂ. ದಂಡ ವಿಧಿಸಬಹುದಾಗಿದೆ.

ದೇಶಾದ್ಯಂತ 50 ಸಾವಿರ ಜನರ ಸಾವು

2015 ರಿಂದ 2017 ರವರೆಗೆ ದೇಶಾದ್ಯಂತ ರೈಲು ಹಳಿ ಮೇಲೆ ನಡೆದ ವಿವಿಧ ಅಪಘಾತಗಳಲ್ಲಿ ಸುಮಾರು 50 ಸಾವಿರ ಜನರು ಮೃತಪಟ್ಟಿದ್ದಾರೆ ಎಂಬುದು ಸರ್ಕಾರಿ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಜನರು ಹಳಿ ಮೇಲೆ ಸಾಗುತ್ತಿದ್ದಾಗ, ಹಳಿ ದಾಟುತ್ತಿ ರುವಾಗ ಈ ಅವಘಡ ನಡೆದಿದೆ. ಪೋನಿನಲ್ಲಿ ಮಾತನಾಡುತ್ತ ಅಥವಾ ವಿದ್ಯುನ್ಮಾನ ಉಪಕರಣ ಬಳಸುತ್ತ ಹಳಿ ಮೇಲೆ ಸಾಗುತ್ತಿದ್ದಾಗ ಹೆಚ್ಚಿನ ಅಪಘಾತ ಸಂಭವಿಸಿದೆ ಎಂದು ರೇಲ್ವೇ ಇಲಾಖೆ ವರದಿ ಹೇಳಿದೆ.

3 ವರ್ಷದಲ್ಲಿ ರೈಲಿಗೆ ಸಿಲುಕಿ ಮೃತಪಟ್ಟವರು

ವರ್ಷ    ಪುರುಷ    ಮಹಿಳೆ    ಒಟ್ಟು

2016    637      106       743

2017    545      109       654

2018    406     81         487