More

    ರೈಲ್ವೆ ಇ-ಟಿಕೆಟ್ ದಂಧೆ ಭೇದಿಸಿದ ಆರ್​ಪಿಎಫ್

    ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಕ್ರಮ ಇ-ಟಿಕೆಟ್ ದಂಧೆ ಸಂಬಂಧ ರೈಲ್ವೆ ಸುರಕ್ಷತಾ ಪಡೆ (ಆರ್​ಪಿಎಫ್) ಜಾರ್ಖಂಡ್ ಮೂಲದ ಸಾಫ್ಟ್​ವೇರ್ ಡೆವಲಪರ್ ಗುಲಾಮ್ ಮುಸ್ತಫಾ ಎಂಬುವವನನ್ನು ಇತ್ತೀಚೆಗೆ ಬಂಧಿಸಿದೆ. ಇ-ಟಿಕೆಟ್ ದಂಧೆಗೆ ಉಗ್ರರಿಗೆ ಹಣಕಾಸು ನೆರವಿನ ನಂಟಿರುವ ಶಂಕೆ ವ್ಯಕ್ತವಾಗಿದ್ದು, ವಿವಿಧ ಭದ್ರತಾ ಸಂಸ್ಥೆಗಳು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿವೆ.

    ಗುಲಾಮ್ ಮುಸ್ತಫಾನನ್ನು ಭುವನೇಶ್ವರದಲ್ಲಿ ಬಂಧಿಸಲಾಗಿದ್ದು, ಅವನ ಬಳಿ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್​ಸಿಟಿಸಿ) 563 ವೈಯಕ್ತಿಕ ಐಡಿಗಳು, ಎಸ್​ಬಿಐನ 2,400 ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ 600 ಶಾಖೆಗಳ ಮಾಹಿತಿ ಪಟ್ಟಿ ಲಭ್ಯವಾಗಿದೆ. ಈ ಬ್ಯಾಂಕ್ ಶಾಖೆಗಳಲ್ಲಿ ಮುಸ್ತಫಾ ನಕಲಿ ಖಾತೆಗಳನ್ನು ಹೊಂದಿರುವ ಶಂಕೆ ಇದೆ ಎಂದು ಆರ್​ಪಿಎಫ್ ಮಹಾನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.

    ಕಳೆದ 10 ದಿನಗಳಿಂದ ಗುಲಾಮ್ ಮುಸ್ತಫಾನನ್ನು ಗುಪ್ತಚರ ದಳ, ಸ್ಪೆಷಲ್ ಬ್ಯೂರೊ, ಜಾರಿ ನಿರ್ದೇಶನಾಲಯ, ಎನ್​ಐಎ ಹಾಗೂ ಕರ್ನಾಟಕ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮುಸ್ತಫಾ 2015ರಲ್ಲಿ ಬೆಂಗಳೂರಿನಲ್ಲಿ ರೈಲು ನಿಲ್ದಾಣದಲ್ಲಿ ಟಿಕೆಟ್ ವೆಂಡಿಂಗ್ ಮಿಷನ್ ಮೂಲಕ ಟಿಕೆಟ್ ಮಾರಾಟ ಮಾಡುತ್ತಿದ್ದ. ಬಳಿಕ ನಕಲಿ ಸಾಫ್ಟ್​ವೇರ್ ಬಳಸಿ ಅಕ್ರಮ ಇ-ಟಿಕೆಟ್ ಮಾರಾಟ ಜಾಲಕ್ಕಿಳಿದಿದ್ದ. ಮುಸ್ತಫಾನಿಂದ ವಶಪಡಿಸಿಕೊಂಡಿರುವ ಮೊಬೈಲ್​ನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳ ಜನರ ನಂಬರ್​ಗಳು ಪತ್ತೆಯಾಗಿವೆ. ಹೀಗಾಗಿ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವಿನ ಜಾಲದ ನಂಟು ಈತನಿಗೆ ಇರಬಹುದು ಎಂಬ ಗುಮಾನಿ ಇದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.

    ಹಮೀದ್ ಅಶ್ರಫ್ ಎಂಬುವವನು ಇ-ಟಿಕೆಟ್ ದಂಧೆಯ ಮಾಸ್ಟರ್ ಮೈಂಡ್ ಆಗಿದ್ದು, ಪ್ರತಿ ತಿಂಗಳು ಇದರಿಂದ -ಠಿ; 10 ರಿಂದ 15 ಕೋಟಿ ಹಣ ಗಳಿಸುತ್ತಿದ್ದಾರೆ. ಸಾಫ್ಟ್​ವೇರ್ ಡೆವಲಪರ್ ಆಗಿರುವ ಅಶ್ರಫ್ 2019ರಲ್ಲಿ ಗೊಂಡಾ ಶಾಲೆಯ ಮೇಲೆ ನಡೆದ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ. ಈಗ ದುಬೈಗೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ ಎಂದು ಆರ್​ಪಿಎಫ್ ಡಿಜಿ ಹೇಳಿದ್ದಾರೆ. ಇದರ ಜತೆಗೆ ಭಾರತದಾದ್ಯಂತ ಶಾಖೆಗಳನ್ನು ಹೊಂದಿರುವ ಸಾಫ್ಟ್​ವೇರ್ ಕಂಪನಿಯೊಂದು ಕೂಡ ಈ ಜಾಲದಲ್ಲಿ ಶಾಮೀಲಾಗಿದೆ. ಇದೇ ಕಂಪನಿ ಸಿಂಗಾಪುರದಲ್ಲಿ ಸಹ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts