ರೈಲ್ವೆ ಸೇತುವೆ ತೊಡಕು ನಿವಾರಣೆ

ಪುತ್ತೂರು: ಎಪಿಎಂಸಿ ರಸ್ತೆಯ ಸಾಲ್ಮರದಲ್ಲಿ ಅಂಡರ್‌ಪಾಸ್ ಇಲ್ಲವೇ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ತೊಡಕುಗಳನ್ನು ನಿವಾರಿಸಿ ಶೀಘ್ರದಲ್ಲೇ ಯೋಜನೆ ಜಾರಿಗೆ ಪ್ರಯತ್ನಿಸಲಾಗುವುದು ಎಂದು ನೈಋತ್ಯ ರೈಲ್ವೆ ವಿಭಾಗೀಯ ಮ್ಯಾನೇಜರ್ ಅಪರ್ಣಾ ಗರ್ಗ್ ಭರವಸೆ ನೀಡಿದರು.

ಪುತ್ತೂರು ರೈಲ್ವೆ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ ಇಲ್ಲಿನ ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿದ ಅವರು, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಸಾಲ್ಮರ ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕೇ ಅಥವಾ ಕೆಳಸೇತುವೆ ನಿರ್ಮಿಸಬೇಕೆ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಒಂದು ಕೋಟಿ ರೂ. ಒಳಗಿನ ಮೊತ್ತದ ಯೋಜನೆಯಾದರೆ ನಾವೇ ವಿಭಾಗದ ನೇತೃತ್ವದಲ್ಲಿ ಕಾಮಗಾರಿ ನಡೆಸುತ್ತೇವೆ. ಅದಕ್ಕಿಂತ ಹೆಚ್ಚಿನ ಮೊತ್ತದ ಯೋಜನೆಯಾದರೆ ರೈಲ್ವೆಯ ನಿರ್ಮಾಣ ವಿಭಾಗದವರು ಜವಾಬ್ದಾರಿ ವಹಿಸುತ್ತಾರೆ. ಅದು ಕೂಡ 50-50 ಪಾಲುದಾರಿಕೆಯಲ್ಲಿ ನಡೆಯಬೇಕು ಎಂದರು.

ಮುಂದಿನ ಕೆಲವೇ ದಿನಗಳಲ್ಲಿ ನಿರ್ಮಾಣ ವಿಭಾಗದವರು ಸ್ಥಳ ಪರಿಶೀಲಿಸಲಿದ್ದಾರೆ. ಇದಾದ ಬಳಿಕ ಅಂಡರ್‌ಪಾಸ್ ಇಲ್ಲವೇ ಓವರ್‌ಬ್ರಿಡ್ಜ್‌ನಲ್ಲಿ ಯಾವುದು ಸೂಕ್ತ ಎಂಬ ಬಗ್ಗೆ ವರದಿ ತಯಾರಿಸುತ್ತಾರೆ. ಅನಂತರ ಅನುಷ್ಠಾನ ಉಪಕ್ರಮಗಳು ಆರಂಭವಾಗಲಿವೆ. ಯೋಜನಾ ವೆಚ್ಚದಲ್ಲಿ ಶೇ.50 ಹಣ ರಾಜ್ಯ ಸರ್ಕಾರ ಡೆಪಾಸಿಟ್ ಇಟ್ಟ ಬಳಿಕ ಉಳಿದ ಅರ್ಧ ಮೊತ್ತವನ್ನು ರೈಲ್ವೆ ಸೇರಿಸಿ ಕಾಮಗಾರಿ ನಡೆಸಲಿದೆ ಎಂದರು.

ಸಿಗ್ನಲ್ ಬಗ್ಗೆ ಮನವಿ: ಸಾಲ್ಮರ ಲೆವೆಲ್ ಕ್ರಾಸಿಂಗ್‌ನಲ್ಲಿರುವ ಸಿಗ್ನಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸುದರ್ಶನ್ ಪುತ್ತೂರು ದೂರಿದರು. ಅದೇ ರೀತಿ ಮಂಗಳೂರು- ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕೆಂದು ಮನವಿ ಮಾಡಿದರು. ಪುತ್ತೂರು ರೈಲ್ವೆ ನಿಲ್ದಾಣದ ಎಲ್ಲ ಮೂಲಸೌಕರ್ಯಗಳ ಬಗ್ಗೆ ಅಧಿಕಾರಿಗೆ ವಿವರಿಸಿದರು.

ರಸ್ತೆ ಪರಿಶೀಲನೆ: ರೈಲ್ವೆ ನಿಲ್ದಾಣದ ಎದುರಿನಿಂದ ಶ್ರೀ ಲಕ್ಷ್ಮೀದೇವಿ ಬೆಟ್ಟ ರಸ್ತೆಗೆ ಹೋಗುವ ಮಣ್ಣಿನ ಕಚ್ಚಾ ರಸ್ತೆಯನ್ನು ಗರ್ಗ್ ಪರಿಶೀಲಿಸಿದರು. ಈ ರಸ್ತೆಯನ್ನು ರೈಲ್ವೆ ವತಿಯಿಂದ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ಮೇರೆಗೆ ಅಪರ್ಣಾ ಪರಿಶೀಲಿಸಿದರು.
ರೈಲ್ವೆ ವಿಭಾಗೀಯ ಇಂಜಿನಿಯರ್ ರವೀಂದ್ರ ಬಿರಾದಾರ್, ಹೆಚ್ಚುವರಿ ಇಂಜಿನಿಯರ್ ಕೃತ್ಯಾನಂದ್, ಕಮರ್ಷಿಯಲ್ ಮ್ಯಾನೇಜರ್ ಯತೀಶ್ ಕುಮಾರ್, ಸೆಕ್ಷನ್ ಇಂಜಿನಿಯರ್ ಕೆ.ಪಿ.ನಾಯ್ಡು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಉಪಾಧ್ಯಕ್ಷ ಮಂಜುನಾಥ ಎನ್. ಎಸ್., ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಪುತ್ತೂರು ಉಪಸ್ಥಿತರಿದ್ದರು.

ಎಪಿಎಂಸಿ ಅಧ್ಯಕ್ಷರ ಮನವಿ: ಸಾಲ್ಮರದಲ್ಲಿ ಅಂಡರ್‌ಪಾಸ್ ಇಲ್ಲವೇ ಓವರ್‌ಬ್ರಿಡ್ಜ್ ನಿರ್ಮಾಣ ವೆಚ್ಚದ ಅರ್ಧ ಮೊತ್ತವನ್ನು ರಾಜ್ಯದ ಪರವಾಗಿ ಎಪಿಎಂಸಿ ಭರಿಸಲು ಸಿದ್ಧವಿದೆ. ಇದಕ್ಕಾಗಿ ನಮ್ಮ ಕ್ರಿಯಾಯೋಜನೆಯಲ್ಲಿ ಮೊತ್ತ ಕಾದಿರಿಸಿದ್ದೇವೆ. ಹಣಕಾಸು ವರ್ಷ ಕೊನೆಯಾಗುವ ಮೊದಲು ವಿನಿಯೋಗಿಸದೇ ಇದ್ದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಅದಕ್ಕೆ ಮೊದಲು ಯೋಜನೆ ಮಂಜೂರು ಮಾಡುವಂತೆ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ರೈಲ್ವೆ ಡಿವಿಶನಲ್ ಮ್ಯಾನೇಜರ್‌ಗೆ ಮನವಿ ಮಾಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ್ಣಾ ಗರ್ಗ್ ಭರವಸೆ ನೀಡಿದರು.

ಆಗಸ್ಟ್‌ನಲ್ಲೇ ರಾಜ್ಯಕ್ಕೆ ಪತ್ರ: ಪುತ್ತೂರಿನ ನೆಹರು ನಗರದಲ್ಲಿ ವಿವೇಕಾನಂದ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಇಕ್ಕಟ್ಟಾಗಿರುವ ರೈಲ್ವೆ ಮೇಲ್ಸೇತುವೆ ಹೊಸದಾಗಿ ನಿರ್ಮಿಸಬೇಕೆಂಬ ಬೇಡಿಕೆ ಇರುವ ಬಗ್ಗೆ ಉತ್ತರಿಸಿದ ಗರ್ಗ್, ಈ ಯೋಜನೆಯ ಪೂರ್ತಿ ಹಣವನ್ನು ರಾಜ್ಯ ಸರ್ಕಾರ ನಮಗೆ ಡೆಪಾಸಿಟ್ ಮಾಡಬೇಕು. ನಮ್ಮ ಇಲಾಖೆ ಇದಕ್ಕೆ ಹಣ ಭರಿಸುವುದಿಲ್ಲ. 5.97 ಕೋಟಿ ರೂ. ವೆಚ್ಚ ತಗುಲಲಿದ್ದು, ಇದನ್ನು ಡೆಪಾಸಿಟ್ ಮಾಡಿದರೆ ಕಾಮಗಾರಿ ನಡೆಸಲಾಗುವುದು ಎಂದರು. ಈ ಬಗ್ಗೆ ಆಗಸ್ಟ್‌ನಲ್ಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.