ಮಲ್ಲಳ್ಳಿ ಜಲಪಾತ ಮತ್ತಷ್ಟು ಸುರಕ್ಷಿತ

ಹಿರಿಕರ ರವಿ ಸೋಮವಾರಪೇಟೆ
ಜಿಲ್ಲೆಯ ಅತಿ ದೊಡ್ಡ, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಮಲ್ಲಳ್ಳಿ ಜಲಪಾತ ಈಗ ಮತ್ತಷ್ಟು ಸುರಕ್ಷಿತ ಪ್ರವಾಸಿ ತಾಣವಾಗಿದೆ.

2005ರಲ್ಲಿ ನಡೆದ ಅವಘಡದಿಂದ ಮಲ್ಲಳ್ಳಿ ಜಲಪಾತ ಹೊರ ಜಗತ್ತಿಗೆ ಪರಿಚಯವಾಯಿತು. ಸೋಮವಾರಪೇಟೆಯ ರಾಗಿಣಿ, ಕಲ್ಲು ಬಂಡೆಗಳ ಮೇಲೆ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಳು. ಫೋಟೋ ಕ್ಲಿಕ್ಕಿಸುತ್ತಿದ್ದ ಯುವತಿ ಈ ದೃಶ್ಯವನ್ನು ಕಂಡು ಗಾಬರಿಯಾಗಿ ಅಂದು ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ನಂತರದ ದಿನಗಳಲ್ಲಿ ಇದಕ್ಕೆ ಪ್ರಚಾರ ಸಿಕ್ಕಿತು.

ಮಳೆಗಾಲದಲ್ಲಿ ಭೋರ್ಗರೆಯುವ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರು ಕಚ್ಚಾ ರಸ್ತೆಯಲ್ಲೆ 3 ಕಿ.ಮೀ. ನಡೆದುಕೊಂಡು ಹೋಗಬೇಕಾಗಿತ್ತು. ಜಲಪಾತದ ಅಭಿವೃದ್ಧಿಗಾಗಿ ಪತ್ರಿಕೆಗಳು ವರದಿ ಪ್ರಕಟಿಸಿದವು ಹಾಗೂ ಸ್ಥಳೀಯ ನಿವಾಸಿಗಳಿಂದ ಹೋರಾಟಗಳು ನಡೆದವು. ಜನಪ್ರತಿನಿಧಿಗಳು ಸರ್ಕಾರದಿಂದ ಅನುದಾನ ತರಲು ಪ್ರಯತ್ನಿದರು. ಇವುಗಳ ನಡುವೆ ಜಲಪಾತದ ಸಮೀಪ ಸುರಕ್ಷತೆಯಿಲ್ಲದೆ ಸಾವುಗಳ ಸಂಖ್ಯೆ ಹೆಚ್ಚಾದವು.

2005ರಿಂದ 2018ರವರೆಗೆ 11 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 4 ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ಸರ್ಕಾರ ಅನುದಾನ ನೀಡುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಹಂಚಿನಳ್ಳಿ ಜಂಕ್ಷನ್‌ನಿಂದ ಜಲಪಾತದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ.

ಜುಲೈ ತಿಂಗಳಲ್ಲಿ ಕುಶಾಲನಗರದ ಸುಂದರನಗರ ನಿವಾಸಿ ಮನೋಜ್(24) ಎಂಬುವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲುಜಾರಿ ಬಿದ್ದು ಪ್ರಾಣ ಕಳೆದುಕೊಂಡರು. ಈ ವೇಳೆ ಸ್ಥಳೀಯರು ಹಾಗೂ ಪ್ರವಾಸಿಗರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಭದ್ರತೆಗೆ ಸಂಬಂಧಪಟ್ಟ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿವೆ.

ಕಾಂಕ್ರೀಟ್ ರಸ್ತೆ ಹಾಗೂ ಸುರಕ್ಷಿತಾ ಕ್ರಮಗಳಿಗಾಗಿ 1.95 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಜಲಪಾತದ ತಳದವರೆಗೂ ಮೆಟ್ಟಿಲುಗಳನ್ನು ನಿರ್ಮಿಸಿ ರೇಲಿಂಗ್ಸ್ ಅಳವಡಿಸಲಾಗಿದೆ. ಈಗ ಮೆಷ್ ಅಳವಡಿಸಲಾಗುತ್ತಿದೆ. ಪ್ರವಾಸಿಗರು ನೀರು ಹರಿಯುವ ಕಲ್ಲುಬಂಡೆಗಳಲ್ಲಿ ನಡೆದಾಡುವಂತಿಲ್ಲ. ಮರಣಬಾವಿ ಎಂದೇ ಕರೆಸಿಕೊಳ್ಳುವ ಹೊಂಡದ ಹತ್ತಿರಕ್ಕೆ ತೆರಳಲು ಸಾಧ್ಯವಿಲ್ಲ. ಈಗ ಮಲ್ಲಳ್ಳಿ ಜಲಪಾತ ಸುರಕ್ಷಿತವಾಗಿದೆ ಎಂಬ ಮಾತು ಪ್ರವಾಸಿಗರಿಂದ ಕೇಳಿಬರುತ್ತಿದೆ. ವಾರಾಂತ್ಯದಲ್ಲಿ ಪ್ರವಾಸಿಗರ ದಂಡೆ ಹರಿದುಬರುತ್ತಿದೆ.

390 ಅಡಿ ಎತ್ತರದಿಂದ ಬೀಳುವ ನೀರು: ಪುಷ್ಪಗಿರಿ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದಲ್ಲಿ 390 ಅಡಿ ಎತ್ತರದಿಂದ ಧುಮ್ಮಿಕ್ಕಿ ಜಲಧಾರೆಯಾಗಿ ಹರಿಯುತ್ತದೆ. ಮೊದಲ ಹಂತದ 300 ಅಡಿ ಎತ್ತರದಿಂದ ಕೆಳಕ್ಕೆ ಧುಮ್ಮಿಕ್ಕಿ ನಂತರ 90ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಹೀಗೆ ಹಂತ ಹಂತವಾಗಿ ಒಟ್ಟಾಗಿ ಸುಮಾರು 390 ಅಡಿ ಎತ್ತರದಿಂದ ನೀರು ಬೀಳುವ ಸದ್ದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುಂದೆ ಹರಿದು ಕುಕ್ಕೆ ಸುಬ್ರಮಣ್ಯ ದೇವಾಲಯದ ಸ್ನಾನಘಟ್ಟ ತಲುಪುತ್ತದೆ.

ಕುಡಿಯುವ ನೀರಿನ ಸೌಲಭ್ಯ, ಪಾರ್ಕಿಂಗ್, ಶೌಚಗೃಹ, ಎರಡು ವೀಕ್ಷಣ ಗೋಪುರಗಳನ್ನು ನಿರ್ಮಿಸಬೇಕಾಗಿದೆ. ಪ್ರವಾಸಿಗರ ಭದ್ರತೆಗೆ ಸಿಬ್ಬಂದಿ ನೇಮಿಸಲಾಗಿದೆ. ಪ್ರವಾಸಿಗರು ರೇಲಿಂಗ್ಸ್ ದಾಟುವ ಪ್ರಯತ್ನಕ್ಕೆ ಮುಂದಾದರೆ ಕಾನೂನು ಕ್ರಮ ಜರುಗಿಸಲಾಗುವುದು.
ಜಗನ್ನಾಥ್ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಕೊಡಗು

ಮಲ್ಲಳ್ಳಿ ಜಲಪಾತದ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇಶದ ಉತ್ತಮ ಜಲಪಾತಗಳಲ್ಲಿ ಇದು ಒಂದು. ಯಾವುದೇ ಆತಂಕವಿಲ್ಲದೆ ಜಲಪಾತವನ್ನು ಹತ್ತಿರದಿಂದ ವೀಕ್ಷಿಸಬಹುದು. ಮಳೆಗಾಲದಲ್ಲಿ ಇದರ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕು.
ಸಾಗರಿಕ ಪ್ರವಾಸಿಗರು, ಹರಿದ್ವಾರ್