15ರಿಂದ ರೈಲ್​ಬಸ್ ಓಡಾಟ ಆರಂಭ

ಕಲಾದಗಿ: ಖಜ್ಜಿಡೋಣಿವರೆಗೆ ಪೂರ್ಣಗೊಂಡಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗದಲ್ಲಿ ಜೂ.15ರಂದು ಪ್ರಯಾಣಿಕರ ರೈಲು ಸಂಚಾರ ಆರಂಭವಾಗಲಿದ್ದು, ಮಂಗಳವಾರ ಅಧಿಕಾರಿಗಳು ಮಾರ್ಗ ಪರಿಶೀಲನೆ ಮಾಡಿದರು.

ಹುಬ್ಬಳ್ಳಿ ವಿಭಾಗದ ರೈಲ್ವೆ ವ್ಯವಸ್ಥಾಪಕ ರಾಜೇಶ್ ಮೊಹನ್ ತಮ್ಮ ಅಧಿಕಾರಿಗಳ ತಂಡದೊಂದಿಗೆ ಬಾಗಲಕೋಟೆಯಿಂದ ಖಜ್ಜಿಡೋಣಿವರೆಗ ಟ್ರ್ಯಾಲಿ ಮೂಲಕ ಮಾರ್ಗ ಪರಿಶೀಲನೆ ಮಾಡಿ ರೈಲು ಸಂಚಾರಕ್ಕೆ ಹಸಿರು ಬಾವುಟ ತೋರಿಸಿದರು.

ಡಿಆರ್​ಎಂ ಹಾಗೂ ರೈಲ್ವೆ ಸಹಾಯಕ ಸಿಬ್ಬಂದಿ ಮಧ್ಯಾಹ್ನ 12ಗಂಟೆಗೆ ಬಾಗಲಕೋಟೆಯಿಂದ ಟ್ರ್ಯಾಲಿ ಮೂಲಕ ನವನಗರ, ಸೂಳಿಕೇರಿ, ಕೆರಕಲಮಟ್ಟಿ, ಚಿಕ್ಕಶೆಲ್ಲಿಕೇರಿ ಮೂಲಕ ಖಜ್ಜಿಡೋಣಿ ರೈಲ್ವೆ ನಿಲ್ದಾಣದವರೆಗಿನ 33 ಕಿ.ಮೀ. ಮಾರ್ಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಖಜ್ಜಿಡೋಣಿಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿದ ರಾಜೇಶ್ ಮೊಹನ್, ರೈಲ್ವೆ ಮಾರ್ಗ ಸಂಚಾರಕ್ಕೆ ಫಿಟ್ ಆಗಿದ್ದು, ಜೂ 15ರಂದು ರೈಲ್​ಬಸ್ ಸಂಚಾರಕ್ಕೆ ಚಾಲನೆ ನೀಡಲಾಗುವುದು. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಈ ಮಾರ್ಗದಲ್ಲಿ ರೈಲ್​ಬಸ್ ಸಂಚಾರ ನಡೆಸಲಿದೆ. ಶೀಘ್ರದಲ್ಲಿ ಸಂಚಾರದ ವೇಳಾಪಟ್ಟಿ ನಿಗದಿ ಮಾಡಲಾಗುವುದು ಎಂದರು.

ಜೂ.14 2016ರಂದು ದೆಹಲಿಯ ಸಿಆರ್​ಸಿ ತಂಡ ಮತ್ತು ಹಿಂದಿನ ತಿಂಗಳು 25ರಂದು ಹುಬ್ಬಳ್ಳಿ ದಕ್ಷಿಣ ನೈರುತ್ಯ ರೈಲ್ವೆ ಮುಖ್ಯ ಅಧಿಕಾರಿ(ಜಿ.ಎಂ) ಎ.ಕೆ.ಗುಪ್ತಾ ಹಾಗೂ ಹಿರಿಯ ಅಧಿಕಾರಿಗಳು ರೈಲ್ವೆ ಮಾರ್ಗವನ್ನು ಪರಿಶೀಲನೆ ಮಾಡಿದ್ದರು.

ಬಹುದಿನದ ಹೋರಾಟದ ಫಲವಾಗಿ ರೈಲುಬಸ್ ಸಂಚಾರಕ್ಕೆ ಮುಹೂರ್ತ ಕೂಡಿಬಂದಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೂ.15ರಂದು ರೈಲ್​ಬಸ್ ಸಂಚಾರ ಆರಂಭಿಸದಿದ್ದಲ್ಲಿ ರೈಲ್ವೆ ಹೋರಾಟ ಸಮಿತಿ ಸದಸ್ಯರು ಜಿಲ್ಲೆಯಾದ್ಯಂತ ಪ್ರತಿಭಟನೆ ಮಾಡಲಿದ್ದೇವೆ.

| ಕುತ್ಬುದ್ದೀನ್ ಖಾಜಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ

Leave a Reply

Your email address will not be published. Required fields are marked *