ಶಿವನಿಯಲ್ಲಿ ವಿಶ್ವಮಾನವ ರೈಲು ನಿಲುಗಡೆ

ಅಜ್ಜಂಪುರ: ಗಡಿ ಗ್ರಾಮದ ಜನರ ಬಹುದಿನದ ಬೇಡಿಕೆಯಾದ ವಿಶ್ವಮಾನವ ಎಕ್ಸ್​ಪ್ರೆಸ್ ರೈಲು ಭಾನುವಾರದಿಂದ ಶಿವನಿ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಈ ಭಾಗದ ಜನರು ಬೆಂಗಳೂರು ಹಾಗೂ ದಾವಣಗೆರೆ ಕಡೆ ತೆರಳಲು ಎಕ್ಸ್​ಪ್ರೆಸ್ ರೈಲಿನ ಅವಶ್ಯಕತೆ ಇರುವುದರಿಂದ ವಿಶ್ವಮಾನವ ಎಕ್ಸ್​ಪ್ರೆಸ್ ರೈಲು ನಿಲುಗಡೆಗೆ ಹಲವು ಬಾರಿ ಮನವಿ ಮಾಡಿದ್ದರು. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರ ಹೋರಾಟದ ಫಲವಾಗಿ ಶಿವನಿಯಲ್ಲಿ ಭಾನುವಾರದಿಂದ ವಿಶ್ವಮಾನವ ಎಕ್ಸ್​ಪ್ರೆಸ್ ರೈಲು ನಿಲುಗಡೆಗೆ ಇಲಾಖೆ ಹಸಿರು ನಿಶಾನೆ ತೋರಿದೆ. ಇದರಿಂದ ಈ ಭಾಗದ ಜನರ ಬಹುದಿನದ ಕನಸು ಈಡೇರಿದಂತಾಗಿದೆ ಎಂದರು. ಕಾರ್ಯಕ್ರಮಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಶಿವನಿ ರೈಲು ನಿಲ್ದಾಣಕ್ಕೆ ಆಗಮಿಸುವರು ಎಂದರು.