ಮೆಟ್ರೋ ರೈಲಲ್ಲಿ ಮಕ್ಕಳಿಗೆ ಪಾಠ

ರಬಕವಿ/ಬನಹಟ್ಟಿ: ಬನಹಟ್ಟಿ ನಗರದ ಕೆಎಚ್​ಡಿಸಿ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕಟ್ಟಡಕ್ಕೆ ಮೆಟ್ರೋ ರೈಲು ಮಾದರಿ ಬಣ್ಣ ಬಳಿದಿದ್ದು, ಮಕ್ಕಳಿಗೆ ರೈಲು ಪುಯಾಣದ ಅನುಭವ ನೀಡುತ್ತಿದೆ.

ರೈಲು ಮಾದರಿ ಕಟ್ಟಡದ ಮೇಲೆ ಸಭಾಂಗಣ ನಿಲ್ದಾಣ, ಕಾರ್ಯಾಲಯ ನಿಲ್ದಾಣ ಎಂದು ಹಲವು ಬಗೆಯ ಹೆಸರು ಬರೆಯಲಾಗಿದೆ. ರೈಲು ಸೀಟಿಗೆ ಸಂಖ್ಯೆ ಬರೆಯುವಂತೆ ಕೊಠಡಿಗಳಲ್ಲಿ ಡೈಸ್ಕ್​ಗಳಿಗೆ ಸಂಖ್ಯೆ ಬರೆಯಲಾಗಿದೆ.

ಮಕ್ಕಳಿಗೆ ಬೆಳಗ್ಗೆ ಶಾಲೆ ಆರಂಭದ ಗಂಟೆ ಬಾರಿಸುವುದಷ್ಟೆ ತಡ ಥಟ್ಟ ಅಂತ ಮೆಟ್ರೋ ರೈಲು ಎದುರು ಓಡಿ ಬಂದು ಪ್ರಾರ್ಥನೆಗೆ ನಿಲ್ಲುತ್ತಾರೆ. ಪ್ರಾರ್ಥನೆ ಮುಗಿದ ತಕ್ಷಣ ಪ್ರಯಾಣಿಕರು ಸರದಿಯಲ್ಲಿ ನಿಂತು ಮೆಟ್ರೋ ರೈಲು ಹತ್ತಿದಂತೆ ಮಕ್ಕಳು ಸರದಿಯಲ್ಲಿ ಕೊಠಡಿಯೊಳಗೆ ಪ್ರವೇಶಿಸುತ್ತಾರೆ. ಇದು ಮಕ್ಕಳಿಗೆ ರೈಲು ಪ್ರಯಾಣದ ಅನುಭವ ನೀಡುವಂತಿದೆ.

1 ರಿಂದ 8ನೇ ತರಗತಿಯವರೆಗೆ 264 ಮಕ್ಕಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್​ಡಿಎಂಸಿ ಸದಸ್ಯರ ಸಹಕಾರದಿಂದ ಶಾಲೆ ಉತ್ತಮ ಹೆಸರು ಪಡೆದುಕೊಂಡಿದೆ. ಶಿಕ್ಷಕರು ಮಕ್ಕಳ ಮೇಲೆ ಇಟ್ಟ ಕಾಳಜಿ ಮಕ್ಕಳ ಕಲಿಕೆಗೆ ಉತ್ತೇಜನಕಾರಿಯಾಗಿದೆ.

ಜ್ಞಾನಾಭಿವೃದ್ಧಿಗೆ ಪ್ರೋತ್ಸಾಹ: ಶಾಲೆಯಲ್ಲಿ ನಿತ್ಯ ಪ್ರಾರ್ಥನೆ ವೇಳೆ ಪಂಚಾಂಗ ಪಠಣ ಮಾಡುವುದು ಸಾಮಾನ್ಯ. ಆದರೆ ಈ ಶಾಲೆಯಲ್ಲಿ ಅದರ ಜತೆಗೆ ಪ್ರಚಲಿತ ವಿದ್ಯಮಾನಗಳು ಹಾಗೂ ರಸಪ್ರಶ್ನೆಯಂತಹ ಕಾರ್ಯಕ್ರಮ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಮಕ್ಕಳಿಗೆ ಪ್ರಾರ್ಥನೆ ವೇಳೆಯೇ ಅನೇಕ ಮಾಹಿತಿ ಪಡೆದುಕೊಳ್ಳಲು ನೆರವಾಗುತ್ತಿದೆ.

ಈ ಹಿಂದೆ ಈ ಶಾಲೆಯ ಗೋಡೆ ಮೇಲೆ ಕ್ರಾಂತಿಕಾರರ, ಶಿವಶರಣರ, ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸಿ ಗಮನ ಸೆಳೆಯಲಾಗಿತ್ತು. ಪ್ರಶಸ್ತಿಗಳ ಗರಿ: ಶಾಲೆಯ ಭೌತಿಕ ಸೌಂದರ್ಯದ ಜತೆಗೆ ಗುಣಮಟ್ಟ ಶಿಕ್ಷಣದಲ್ಲೂ ಶಾಲೆ ಉತ್ತಮ ದಾಖಲೆ ಹೊಂದಿದೆ. ಇದರಂಗವಾಗಿ ಶಾಲೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. 2003ರಲ್ಲಿ ವರ್ಗ ಬೋಧನಾ ಪ್ರಶಸ್ತಿ, 2005ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ, ಕಲಿಕಾ ಖಾತ್ರಿ ಶಾಲೆ ಪ್ರಶಸ್ತಿ, 2007ರಲ್ಲಿ ಶಾಲಾ ಗುಣಮಟ್ಟ ಪ್ರಶಸ್ತಿ, , 2016ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ , 2017ರಲ್ಲಿ ಪರಿಸರ ಮಿತ್ರ ದಲ್ಲಿ ಹಳದಿ ಶಾಲೆ ಪ್ರಶಸ್ತಿ ಪಡೆದುಕೊಂಡಿದೆ. ಶಾಲೆಯ ಮಕ್ಕಳು ಸಾಂಸ್ಕ್ರತಿಕ ಕಾರ್ಯಕ್ರಮವಾದ ಪ್ರತಿಭಾ ಕಾರಂಜಿಯಲ್ಲಿ ವಲಯ, ತಾಲೂಕಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟದವರೆಗೂ ಸ್ಪರ್ಧಿಸಿದ್ದಾರೆ.

ಜ್ಞಾನದ ಕಣಜಗಳಾದ ಗಣಕಯಂತ್ರ ಕೋಣೆ, ಗ್ರಂಥಾಲಯ ಕೋಣೆ, ಕ್ರೀಡಾ ಕೋಣೆಗಳು ವ್ಯವಸ್ಥಿ ತವಾಗಿದ್ದು ಅವುಗಳ ಸೂಕ್ತ ಬಳಕೆಯಿಂದ ಮಕ್ಕಳು ಸಾಧನೆಗೆ ಪ್ರೋತ್ಸಾಹಕ ವಾತಾವರಣವಿದೆ.

ಹಸಿರು ವಾತಾವರಣ: ಶಾಲೆಯ ಆವರಣದಲ್ಲಿ ಇನ್ನೂರಕ್ಕೂ ಹೆಚ್ಚು ನಾನಾ ತರಹದ ಗಿಡ ಮರಗಳನ್ನು ಬೆಳೆಸಲಾಗಿದೆ. ಮಕ್ಕಳು ಗಿಡಗಳ ನೆರಳಲ್ಲಿ ಆಟ ಆಡುತ್ತಾರೆ, ಮರಗಳ ಕೆಳಗೆ ನೆರಳಲ್ಲಿ ಕುಳಿತು ಊಟ ಮಾಡುತ್ತಾರೆ. ಕೆಲವೊಮ್ಮೆ ಶಿಕ್ಷಕರು ಗಿಡದ ನೆರಳಿನಲ್ಲಿ ಕೂರಿಸಿ ಬೋಧನೆ ಮಾಡುತ್ತಾರೆ. ಆವರಣದಲ್ಲಿ ವಿವಿಧ ತರಕಾರಿ ಬೆಳೆಯಲಾಗಿದ್ದು, ಇಲ್ಲಿನ ತರಕಾರಿಯನ್ನೇ ಬಿಸಿ ಊಟಕ್ಕೆ ಉಪಯೋಗಿಸಲಾಗುತ್ತಿದೆ.