ಡೀಮ್ಡ್ ಫಾರೆಸ್ಟ್ 4 ಜಲ್ಲಿ ಕ್ರಷರ್‌ಗೆ ದಾಳಿ

ಕಾರ್ಕಳ: ಡೀಮ್ಡ್ ಫಾರೆಸ್ಟ್‌ನಲ್ಲಿ ಕಾರ್ಯಾಚರಿಸುತ್ತಿದ್ದ ನಾಲ್ಕು ಜಲ್ಲಿ ಕ್ರಷರ್‌ಗಳಿಗೆ ವಿವಿಧ ಇಲಾಖಾಧಿಕಾರಿಗಳು ಮಂಗಳವಾರ ಜಂಟಿ ದಾಳಿ ನಡೆಸಿ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ನಂದಳಿಕೆ, ಪಳ್ಳಿ ವ್ಯಾಪ್ತಿಯಲ್ಲಿ ಸಿ.ಎಂ.ಜಾಯ್ ಮಾಲೀಕತ್ವದ ಜಾಯ್ ಕ್ರಷರ್, ದಿನೇಶ್ ಶೆಟ್ಟಿ ಮಾಲೀಕತ್ವದ ಶ್ರೀನಿಧಿ ಕ್ರಷರ್, ಗುಂಡ್ಯಡ್ಕದಲ್ಲಿ ಪ್ರಶಾಂತ್ ಕಾಮತ್ ಮಾಲೀಕತ್ವದ ದಾಮೋದರ ಕ್ರಷರ್, ದಿನೇಶ್ ಮಾಲೀಕತ್ವದ ಮಹಾಗಣಪತಿ ಕ್ರಷರ್ ಮೇಲೆ ದಾಳಿ ನಡೆದಿದೆ.

ಕ್ವಾರಿಗಳಲ್ಲಿ ಬಿಹಾರ್ ಮತ್ತು ಒಡಿಶಾದ ಕಾರ್ಮಿಕರು ದುಡಿಯುತ್ತಿದ್ದು, ದಾಳಿ ಸಂದರ್ಭ ಬಹುತೇಕ ಮಂದಿ ಪರಾರಿಯಾಗಿದ್ದಾರೆ. ಕೆಲವರನ್ನು ವಶಕ್ಕೆ ತೆಗೆದು ವಿಚಾರಣೆಗೆ ಒಳಪಡಿಸಲಾಗಿದೆ. ತಹಸೀಲ್ದಾರ್ ಮಹಮ್ಮದ್ ಇಸಾಕ್, ಭೂ ಮತ್ತು ಗಣಿ ಇಲಾಖಾಧಿಕಾರಿ ಮಹದೇವ್, ಎಎಸ್‌ಪಿ ಕೃಷ್ಣಕಾಂತ್, ಗ್ರಾಮಾಂತರ ಎಸ್‌ಐ ನಾಸೀರ್ ಹುಸೈನ್, ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್, ಗ್ರಾಮಕರಣಿಕ ಶಿವಪ್ರಸಾದ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ದಾಖಲೆ ಪರಿಶೀಲನೆ ಬಳಿಕ ಪೊಲೀಸರು ಕೇಸು ದಾಖಲಿಸಿಕೊಳ್ಳಲಿದ್ದಾರೆ.

ಎಗ್ಗಿಲ್ಲದೆ ಕಾರ್ಯಾಚರಿಸುತ್ತಿರುವ ಅಕ್ರಮ ಕ್ರಷರ್: ಬಹುತೇಕ ಕ್ವಾರಿ ಹಾಗೂ ಕ್ರಷರ್‌ಗಳು ಡೀಮ್ಡ್ ಫಾರೆಸ್ಟ್‌ನೊಳಗಿರುವುದರಿಂದ ಹಿಂದೆ ನೀಡಿದ ಅನುಮತಿ ಪತ್ರ ರದ್ದುಪಡಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಬಳಿಕ ಜನರೇಟರ್ ಬಳಸಿ ಕ್ರಷರ್ ಕಾರ್ಯಾಚರಿಸುತ್ತಿತ್ತು. ಡೀಮ್ಡ್ ಫಾರೆಸ್ಟ್ ವಿವಾದ ನ್ಯಾಯಾಲಯ ವಿಚಾರಣೆಯಲ್ಲಿರುವುದರಿಂದ ತಾಲೂಕು ವ್ಯಾಪ್ತಿಯಲ್ಲಿ ಕ್ವಾರಿ ಹಾಗೂ ಕ್ರಷರ್‌ಗಳು ಎಗ್ಗಿಲ್ಲದೆ ಕಾರ್ಯಾಚರಿಸುತ್ತಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.