ರಾಯಚೂರು: ತಾಲೂಕಿನ ಯರಮರಸ್‌ನಲ್ಲಿರುವ ನೂಲಿನ ಗಿರಣಿ ಮುಚ್ಚಿಹೋಗಿದ್ದು, ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಬಾಕಿ ವೇತನ, ಪಿಎಫ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಅಲ್ಲಿನ ಆಡಳಿತ ನೀಡದೇ ಕಾರ್ಮಿಕರಿಗೆ ಅನ್ಯಾಯ ಮಾಡಿದೆ ಎಂದು ಸಹಕಾರಿ ನೂಲಿನ ಗಿರಣಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ.ರುದ್ರಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನೂಲಿನ ಗಿರಣಿ ಇರುವ ಜಮೀನು ಸರ್ಕಾರದ್ದಾಗಿದ್ದು, ಅಕ್ರಮವಾಗಿ ಖಾಸಗಿ ಕಂಪನಿಗೆ ಇಲ್ಲಿನ ಅಧಿಕಾರಿಗಳು ಮಾರಾಟ ಮಾಡಿರುವುದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮತ್ತೆ ಕಾರ್ಯಾರಂಭಿಸಲಿ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿ
ಕಾರ್ಮಿಕರ ವೇತನ, ಪಿಫ್ ಹಣವನ್ನು ಕಂಪನಿಯ ಅಧಿಕಾರಿಗಳು ಪಾವತಿ ಮಾಡದೇ ನಿರ್ಲಕ್ಷೃ ವಹಿಸುತ್ತಿದ್ದು, 4 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕಾರ್ಮಿಕರಿಗೆ ಪಾವತಿ ಮಾಡಬೇಕಾಗಿದ್ದು, ಕೂಡಲೇ ಜಿಲ್ಲಾಡಳಿತ ಈ ವಿಚಾರದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ, ಜಯರಾಮ್, ಜಿಲಾನಿ, ದೇವರಾಜ್, ಹುಸೇನಪ್ಪ, ನರಸಪ್ಪ, ರಾಮನಗೌಡ ಏಗನೂರು ಸೇರಿದಂತೆ ಇತರರಿದ್ದರು.