ಕಾಮಗಾರಿ ವೇಗ ಹೆಚ್ಚಳಕ್ಕೆ ಪ್ರಯತ್ನ

<ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಸುಬೋಧ್ ಯಾದವ್ ಹೇಳಿಕೆ>

ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ ್ನ ನಡೆಸುವುದರ ಜತೆಗೆ ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ಜಿಲ್ಲಾವಾರು ಪ್ರಗತಿ ಪರಿಶೀಲನೆ ನಡೆಸುವ ಮೂಲಕ ಕಾಮಗಾರಿ ಶೀಘ್ರವಾಗಿ ಮುಗಿಸಲು ಸೂಚನೆ ನೀಡಲಾಗುತ್ತಿದೆ. 2013-14ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಮಂಜೂರಾದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಸುಮಾರು 100 ಹಳೇ ಕಾಮಗಾರಿ ಬಾಕಿ ಉಳಿದಿವೆ. ಪರಿಶೀಲನೆ ಸಂದರ್ಭದಲ್ಲಿ ಅದರ ಸಂಖ್ಯೆ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ ಎಂದರು.

2019-20ನೇ ಸಾಲಿನ ಅನುದಾನ ಈ ವರ್ಷಕ್ಕೆ ಸೇರ್ಪಡೆ ಮಾಡಲಾಗಿಲ್ಲ. ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಸೇರಿ ಅನೇಕ ಪ್ರಕ್ರಿಯೆ ನಡೆಸಬೇಕಾಗುವ ಕಾರಣ ಕಾಮಗಾರಿ ಅದೇ ವರ್ಷದಲ್ಲಿ ಆರಂಭವಾಗುವುದಿಲ್ಲ. ಕ್ರಿಯಾ ಯೋಜನೆ ತಯಾರಿಸುವಾಗ ಆಯಾ ವರ್ಷದ ಕಾಮಗಾರಿಗೆ ಬೇಕಾದ ಅನುದಾನ ನೀಡುವುದರಿಂದ ಅನುದಾನದಲ್ಲಿ ಕಡಿತವಾಗುವುದಿಲ್ಲ.

ಡ್ರಾಪ್‌ಔಟ್ ಹೆಚ್ಚಿರುವ, ಫಲಿತಾಂಶ ಕಡಿಮೆಯಿರುವ ಮೇಲ್ದರ್ಜೆಗೇರಿಸಲಾದ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಮಂಡಳಿ ಅನುಮತಿ ನೀಡಿದೆ. ಆದರೆ ಸರ್ಕಾರ ಹುದ್ದೆಗಳನ್ನು ಗುರುತಿಸಬೇಕಾಗಿರುವ ಕಾರಣ ವಿಳಂಬವಾಗುತ್ತಿದೆ. ಜಿಲ್ಲೆಯ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಈಗಾಗಲೇ 10 ಸಾವಿರ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರವಾದಲ್ಲಿ ಆಡಳಿತ ಸುಸೂತ್ರವಾಗಿ ನಡೆಯಲು ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿ ಬಿ.ಶರತ್, ಜಿ.ಪಂ. ಸಿಇಒ ನಲಿನ್ ಅತುಲ್, ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ ಇದ್ದರು.

 

ನಮ್ಮ ಹೊಲ ನಮ್ಮ ದಾರಿ ಯೋಜನೆ ಕೈಬಿಟ್ಟಿಲ್ಲ. ಜಿಲ್ಲಾಡಳಿತ ಕಳುಹಿಸುವ ಪ್ರಸ್ತಾವನೆಗಳು ಜನರಿಗೆ ಹಾಗೂ ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ಉಪಯೋಗವಾಗಲಿವೆ ಎನ್ನುವುದನ್ನು ನೋಡಿಕೊಂಡು ಅನುದಾನ ನೀಡಲಾಗುತ್ತಿದೆ. ವಸತಿ ಸಹಿತ ಪದವಿ ಕಾಲೇಜು ಆರಂಭ ಪ್ರಸ್ತಾವನೆಯಲ್ಲಿ ಇಲ್ಲ.
| ಸುಬೋಧ್ ಯಾದವ್ ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ