ಮಹಿಳಾ ಅಧಿಕಾರಿಗೆ ಜೀವ ಭಯ

ಭದ್ರತೆ ಕೋರಿ ಮೇಲಧಿಕಾರಿಗೆ ಪತ್ರ ಬರೆದ ಸಹಾಯಕ ಅಧಿಕಾರಿ

ರಾಯಚೂರು: ಮಾನ್ವಿಯಲ್ಲಿ ಅಕ್ರಮ ಮರಳು ದಂಧೆ ತಡೆಗೆ ಮುಂದಾದ ಗ್ರಾಮ ಲೆಕ್ಕಾಧಿಕಾರಿ ಹತ್ಯೆಗೀಡಾದ ಬಳಿಕ ಎಲ್ಲ ಇಲಾಖೆ ಅಧಿಕಾರಿಗಳಲ್ಲಿ ಭಯ ಮನೆ ಮಾಡಿದೆ. ಈ ನಡುವೆ ಮೀನುಗಾರಿಕೆ ಇಲಾಖೆ ಮಹಿಳಾ ಅಧಿಕಾರಿ ಜೀವ ಭಯವಿದ್ದು, ಭದ್ರತೆ ಒದಗಿಸುವಂತೆ ಮೇಲಧಿಕಾರಿಗೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೇವದುರ್ಗ ತಾಲೂಕಿನ ಪರಾಪುರ ಕೆರೆಯಲ್ಲಿ ಅಕ್ರಮ ಮೀನುಗಾರಿಕೆ ದೂರು ಬಂದ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಅವರಿಗೆ ಪರಿಶೀಲನೆ ಹಾಗೂ ಸರ್ವೇ ನಡೆಸಲು ಸೂಚಿಸಲಾಗಿತ್ತು. ಆದರೆ, ಪರಿಶೀಲನೆಗೆಂದು ಹೋದಾಗಲೆಲ್ಲ ಅಲ್ಲಿ ನಡೆಯುವ ವಾಗ್ವಾದ, ಜಗಳ, ಬೆದರಿಕೆಯಿಂದ ಭಯಗೊಂಡ ಅಧಿಕಾರಿ ಸುಮಾ, ಪೊಲೀಸ್ ಭದ್ರತೆ ಕಲ್ಪಿಸುವಂತೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶರಣಬಸವಗೆ ಪತ್ರ ಬರೆದಿದ್ದಾರೆ. ಮೀನುಗಾರಿಕೆ ಸಚಿವರ ತವರಲ್ಲೇ ಇಲಾಖೆ ಅಧಿಕಾರಿಗೆ ಜೀವ ಭಯ ಹುಟ್ಟಿಸಿರುವುದು ಅಚ್ಚರಿ ಮೂಡಿಸಿದೆ.

ಪರಾಪುರ ಕೆರೆಯಲ್ಲಿ ಮೀನುಗಾರಿಕೆ ಟೆಂಡರ್ ವಿಚಾರಕ್ಕೆ ಕೆಲವರ ಮಧ್ಯೆ ವಿವಾದವಿತ್ತು. ಹೀಗಾಗಿ ಗ್ರಾಮಸ್ಥರು ಸರ್ವೇ ನಡೆಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಸರ್ವೇ ನಡೆಸುವಂತೆ ಇಲಾಖೆಗೆ ಸೂಚಿಸಿತ್ತು. ತಾಲೂಕಿನ ಸಹಾಯಕ ನಿರ್ದೇಶಕಿ ಸುಮಾಗೆ ಸರ್ವೇ ಜವಾಬ್ದಾರಿ ನೀಡಲಾಗಿತ್ತು. ಕೆರೆಗೆ ತೆರಳಿದ ಹಲವು ಸಲ ಗ್ರಾಮದ ಕೆಲವರು ವಿನಾಕಾರಣ ಗಲಾಟೆ, ವಾಗ್ವಾದ ನಡೆಸಿ ಸರ್ವೆಗೆ ಅಡ್ಡಿ ಪಡಿಸುತ್ತಿದ್ದರು. ಅಲ್ಲದೆೆ ಜೀವ ಭಯದ ವಾತಾವರಣವನ್ನೂ ಸೃಷ್ಟಿಸಿದ್ದರು. ಕಚೇರಿಗೆ ಬಂದು ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಪೊಲೀಸ್ ಭದ್ರತೆ ಒದಗಿಸಿದರೆ ಮಾತ್ರ ಸರ್ವೇ ನಡೆಸುವುದಾಗಿ ಮೇಲಧಿಕಾರಿಗೆ ಬರೆದ ಪತ್ರದಲ್ಲಿ ಸುಮಾ ತಿಳಿಸಿದ್ದಾರೆ.

ನಿಜಾಮನ ಕಾಲದ ಪರಾಪುರ ಕೆರೆಯಲ್ಲಿ ಗ್ರಾಮದ ಕೆಲ ಪ್ರಭಾವಿಗಳು ಹಲವು ವರ್ಷಗಳಿಂದ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದಾರೆ. ನಿತ್ಯ ಸಾವಿರಾರು ರೂ . ಮೊತ್ತದ ಮೀನುಗಳನ್ನು ಹಿಡಿದು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಕೆರೆಯಲ್ಲಿ ನಡೆಯುತ್ತಿರುವ ಅಕ್ರಮ ಮೀನುಗಾರಿಕೆ ಬಗ್ಗೆ ಅಧಿಕಾರಿ ಸುಮಾ ಜಾಲಹಳ್ಳಿ ಪೊಲೀಸ್ ಠಾಣೆ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದ್ದು, ಜಿಲ್ಲಾಡಳಿತ ಗಮನಹರಿಸಬೇಕಿದೆ.

ಕೆರೆಯಲ್ಲಿ ಮೀನುಗಾರಿಕೆ ನಡೆಸುವ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ವಿವಾದಗಳಿವೆ. ಪರಿಶೀಲನೆ, ಸರ್ವೇ ಸಂದರ್ಭ ಆದ ಕೆಟ್ಟ ಅನುಭವದಿಂದ ಭದ್ರತೆ ಒದಗಿಸುವಂತೆ ಪತ್ರ ಬರೆದಿದ್ದೇನೆ. ಸಾಹೇಬ್ ಪಟೇಲ್ ಪ್ರಕರಣದಿಂದ ನನಗೂ ಭಯವಾಗಿದೆ. ಮುಂದಿನ ದಿನಗಳಲ್ಲಿ ಭದ್ರತೆ ನೀಡಿದರೆ ಮಾತ್ರ ಪರಾಪುರ ಕೆರೆಗೆ ಹೋಗುತ್ತೇನೆ.
|ಸುಮಾ ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ದೇವದುರ್ಗ

ಜೀವ ಭಯ ಇದೆ. ಪರಾಪುರ ಕೆರೆಗೆ ಭದ್ರತೆ ಇಲ್ಲದೆ ಪರಿಶೀಲನೆಗೆ ತೆರಳಲ್ಲ ಎಂದು ಇಲಾಖೆ ಅಧಿಕಾರಿ ಸುಮಾ ಪತ್ರ ಬರೆದಿರುವುದು ನಿಜ. ಹೊಸಬರಾಗಿರುವ ಅವರು, ವಿಎ ಸಾಹೇಬ್ ಪಟೇಲ್ ಪ್ರಕರಣದಿಂದ ಭಯಗೊಂಡಿದ್ದಾರೆ. ಅವರಿಗೆ ಧೈರ್ಯ ಹೇಳಿ ಕಳಿಸಿರುವೆ. ಪೊಲೀಸ್ ಭದ್ರತೆಯೊಂದಿಗೆ ಸರ್ವೇ ಮಾಡಿದ್ದಾರೆ. ನನಗೆ ಬರೆದ ಪತ್ರವನ್ನು ಮೇಲಧಿಕಾರಿಗಳಿಗೆ ಕಳಿಸಿ ಗಮನಕ್ಕೆ ತಂದಿದ್ದೇನೆ.
| ಶರಣಬಸವ ಹಿರಿಯ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ