28ರೊಳಗೆ ರಾಯಚೂರು ವಿವಿ ಆರಂಭಿಸಿ- ವಿವಿ ಹೋರಾಟ ಸಮಿತಿ ಪ್ರತಿಭಟನೆ

ರಾಯಚೂರು: ನೂತನ ರಾಯಚೂರು ವಿವಿ ಆರಂಭಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷೃ ಧೋರಣೆ ಖಂಡಿಸಿ ವಿಶ್ವ ವಿದ್ಯಾಲಯ ಹೋರಾಟ ಸಮಿತಿಯ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಪ್ರಶ್ನಿಸಿದ್ದನ್ನು ಮನವರಿಕೆ ಮಾಡಿಕೊಡುವ ನೇತೃತ್ವವನ್ನು ಸಚಿವ ವೆಂಕಟರಾವ್ ನಾಡಗೌಡ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ವಹಿಸಿಕೊಂಡು ಜೂ.28ರೊಳಗೆ ವಿವಿ ಆರಂಭಿಸಲು ಸರ್ಕಾರಕ್ಕೆ ಒತ್ತಡ ಹೇರಬೇಕು.

2019-20ನೇ ಶೈಕ್ಷಣಿಕ ಸಾಲಿನಲ್ಲಿ ವಿವಿ ಕಾರ್ಯಾರಂಭಕ್ಕಾಗಿ ಮೇ ತಿಂಗಳಲ್ಲಿ ನಡೆದ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ನಿರ್ಣಯ ತೆಗೆದುಕೊಂಡು ರಾಜ್ಯ ಪಾಲರಿಗೆ ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲರು ತುರ್ತು ಅಗತ್ಯವೇನಿದೆ ಎಂದು ವಾಪಸ್ ಕಳುಹಿಸಿದ್ದಾರೆ. ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಮುಂದಿನ ಒಂದು ವಾರದಲ್ಲಿ ವಿವಿ ಸ್ಥಾಪನೆಯ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅನುಮೋದನೆ ಪಡೆದು ಗೆಜೆಟ್ ಪ್ರಕಟಣೆ ಹೊರಡಿಸಬೇಕು. ಪ್ರಸಕ್ತ ವರ್ಷದಿಂದಲೇ ರಾಯಚೂರು ವಿವಿ ಆರಂಭವಾಗಬೇಕು, ವಿಶೇಷ ಆಡಳಿತ ಅಧಿಕಾರಿ ನೇಮಕವಾಗಿದ್ದು ವಿಧಾನ ಮಂಡಲ ಅಧಿವೇಶನ ಅಧಿಸೂಚನೆ ಪ್ರಕಟಿಸುವ ಮುನ್ನವೇ ರಾಜ್ಯಪಾಲರಿಗೆ ಮನವರಿಕೆ ಮಾಡುವುದು ಅವಶ್ಯಕವಾಗಿದೆ. ಈ ಎಲ್ಲ ಪ್ರಕ್ರಿಯೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮೇಲುಸ್ತುವಾರಿ ವಹಿಸಿಕೊಳ್ಳಬೇಕು. ವಿಳಂಬವಾದಲ್ಲಿ ರಾಯಚೂರು, ಯಾದಗಿರಿ ಜಿಲ್ಲಾ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಸಂಚಾಲಕ ಡಾ. ರಜಾಕ್ ಉಸ್ತಾದ್, ಅಶೋಕಕುಮಾರ್ ಜೈನ್, ವೀರೇಶ ಹೀರಾ, ಸಿರಾಜ್ ಜಾಫ್ರಿ, ಶ್ಯಾಮ್ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *