ವಿಟಿಯು ಮುಚ್ಚಲು ಸರ್ಕಾರದ ಹುನ್ನಾರ

ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆರೋಪ | ಹಾಸನದಲ್ಲಿ ಮತ್ತೊಂದು ತಾಂತ್ರಿಕ ವಿವಿ ಆರಂಭಕ್ಕೆ ವಿರೋಧ

ರಾಯಚೂರು: ಹಾಸನ ಜಿಲ್ಲೆಯಲ್ಲಿ ಮತ್ತೊಂದು ತಾಂತ್ರಿಕ ವಿವಿ ಆರಂಭಿಸುವ ಮೂಲಕ ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮುಚ್ಚಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆರೋಪಿಸಿದರು.

ತಾಂತ್ರಿಕ ವಿವಿ ವಿಂಗಡನೆ ವಿರೋಧಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಪರಿಶೀಲಿಸುವ ಭರವಸೆ ನೀಡಿದ್ದರಿಂದ ಕೈಬಿಡಲಾಗಿದೆ. ನಿರ್ಲಕ್ಷಿಸಿದರೆ ಹೋರಾಟ ನಡೆಸಲಾಗುವುದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

1998ರಲ್ಲಿ ಬೆಳಗಾವಿಯಲ್ಲಿ ಆರಂಭವಾದ ತಾಂತ್ರಿಕ ವಿವಿ 35 ಇಂಜಿನಿಯರಿಂಗ್ ಕೋರ್ಸ್‌ಗಳ ಮೂಲಕ ರಾಜ್ಯದ ಎಲ್ಲ 218 ಇಂಜಿನಿಯರಿಂಗ್ ಕಾಲೇಜುಗಳ ಸಂಯೋಜನೆಗೆ ಒಳಗೊಂಡಿದ್ದು, ಸುಮಾರು 4 ಲಕ್ಷ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. 2012ರಲ್ಲಿ ಡಿಜಿಟಲ್ ಮೌಲ್ಯಮಾಪನ ಅಳವಡಿಸಿಕೊಂಡ ಮೊಟ್ಟ ಮೊದಲ ವಿವಿಯಾಗಿದೆ ಎಂದು ತಿಳಿಸಿದರು.

ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿ ಪ್ರಾದೇಶಿಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ವಿಶ್ವೇಶ್ವರಯ್ಯನವರ ಊರಾದ ಮುದ್ದೇನಹಳ್ಳಿಯಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲಾಗಿದೆ. ಸಮಯಕ್ಕೆ ಸರಿಯಾಗಿ ಪರೀಕ್ಷೆ, ಫಲಿತಾಂಶ ಪ್ರಕಟಿಸುವ ಮೂಲಕ ದೇಶದಲ್ಲಿ ಉತ್ತಮ ತಾಂತ್ರಿಕ ವಿವಿ ಎನ್ನುವ ಹೆಸರು ಗಳಿಸಿದೆ. ಬೆಂಗಳೂರು ವಿಭಾಗದಲ್ಲಿ 110, ಮೈಸೂರು ವಿಭಾಗದಲ್ಲಿ 59, ಬೆಳಗಾವಿ ವಿಭಾಗದಲ್ಲಿ 32, ಕಲಬುರಗಿ ವಿಭಾಗದಲ್ಲಿ 17 ತಾಂತ್ರಿಕ ಕಾಲೇಜುಗಳಿವೆ. ಹಾಸನದಲ್ಲಿ ಮತ್ತೊಂದು ತಾಂತ್ರಿಕ ವಿವಿ ಸ್ಥಾಪಿಸಿದಲ್ಲಿ ಒಟ್ಟು 4 ಲಕ್ಷ ವಿದ್ಯಾರ್ಥಿಗಳಲ್ಲಿ ಬೆಳಗಾವಿ ವಿವಿಗೆ ಕೇವಲ 50 ಸಾವಿರ ವಿದ್ಯಾರ್ಥಿಗಳು ಉಳಿದಂತಾಗಲಿದ್ದು, ವಿವಿ ಮುಚ್ಚುವ ಹುನ್ನಾರ ನಡೆದಿದೆ ಎಂದು ದೂರಿದರು. ಸಮಿತಿ ಪದಾಧಿಕಾರಿಗಳಾದ ಶಿವಕುಮಾರ ಯಾದವ, ವೆಂಕಟೇಶ, ಶರಣಬಸ್ಸಪ್ಪ ಅಚ್ಚೊಳ್ಳಿ ಇದ್ದರು.

One Reply to “ವಿಟಿಯು ಮುಚ್ಚಲು ಸರ್ಕಾರದ ಹುನ್ನಾರ”

  1. It is one more incident which shows the step mother attitude to North Karnataka by Sri HDK Swamy Govt
    Let the government should clarify it’s stand in respect of VTU

Comments are closed.