ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು ಅನನ್ಯ ಕಾರ್ಯ

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಶ್ಲಾಘನೆ |ಡಾ.ವಿಜಯಸಂಕೇಶ್ವರ ದಂಪತಿಗೆ ಸನ್ಮಾನ, ಆಶೀರ್ವಚನ

ರಾಯಚೂರು: ವಿಆರ್‌ಎಲ್‌ನಂತಹ ಬೃಹದಾಕಾರ ಸಂಸ್ಥೆ ಕಟ್ಟಿ, ಸಾವಿರಾರು ಜನರಿಗೆ ಉದ್ಯೋಗ ಒದಗಿಸಿರುವ ಡಾ.ವಿಜಯ ಸಂಕೇಶ್ವರರ ಕಾರ್ಯ ಅನನ್ಯ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.

ಮಂತ್ರಾಲಯ ಶ್ರೀ ರಾಘವೇಂದ್ರ ಮಠಕ್ಕೆ ಭಾನುವಾರ ಆಗಮಿಸಿದ್ದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ದಂಪತಿಯನ್ನು ಸನ್ಮಾನಿಸಿ, ಆಶೀರ್ವದಿಸಿದ ಶ್ರೀಗಳು, ವಿಆರ್‌ಎಲ್ ಸಂಸ್ಥೆಯನ್ನು ಕಟ್ಟಿ, ದೊಡ್ಡ ಮಟ್ಟದಲ್ಲಿ ಬೆಳೆಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ವಿಆರ್‌ಎಲ್ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ಬದುಕು ಕಲ್ಪಿಸಿದ್ದು, ದೇಶದಲ್ಲೇ ಮಾದರಿ ಸಂಸ್ಥೆಯಾಗಿದೆ. ಸಂಕೇಶ್ವರರ ಸಂಕಲ್ಪ, ನಿರಂತರ ಪರಿಶ್ರಮ ಇತರರಿಗೆ ಅನುಕರಣೀಯ. ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ 24/7 ನ್ಯೂಸ್ ಚಾನಲ್‌ನಿಂದ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಧರ್ಮ, ಸಂಸ್ಕೃತಿ ಉಳಿವಿಗಾಗಿ ಉತ್ತಮ ಕಾರ್ಯ ಮಾಡುತ್ತಿದೆ. ಧರ್ಮ ನಿಷ್ಠೆಯಿಂದ ಮಾಡುವ ನಿಮ್ಮ ಕೆಲಸಗಳು ಯಶಸ್ವಿಯಾಗಲಿ, ಸಮಾಜಕ್ಕೆ ಮತ್ತಷ್ಟು ಉಪಯುಕ್ತ ಕಾರ್ಯಗಳಾಗಲಿ ಎಂದು ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವದಿಸಿದರು.

ಈ ಸಂದರ್ಭ ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ.ಶ್ರೀನಿವಾಸ ರಾವ್, ಐ.ಪಿ.ನರಸಿಂಹಾಚಾರ್, ಪಿಆರ್‌ಓ ಬಿಂದು ಮಾಧವ ಉಪಸ್ಥಿತರಿದ್ದರು.