ರಾಯಚೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿ ವಿವಿಧ ದಲಿತಪರ ಸಂಘಟನೆಗಳಿಂದ ನಗರದ ಡಾ.ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಂಜೆ ವಿಜಯೋತ್ಸವ ಆಚರಿಸಲಾಯಿತು.
ಇದೇ ವೇಳೆ ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, ಪರಿಶಿಷ್ಟ ಜಾತಿಗಳಲ್ಲಿ ಅತಿ ಹಿಂದುಳಿದವರಿಗೆ ಒಳ ಮೀಸಲಾತಿಯನ್ನು ನೀಡುವ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡುವ ತೀರ್ಪಿನಿಂದ ಇಂದು ಪರಿಶಿಷ್ಟ ಜಾತಿಗಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಸ್ವಾಗತಾರ್ಹ; ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕಾಂಗ್ರೆಸ್ ಬದ್ಧ: ಸಿಎಂ
ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಮುಖಂಡ ಅಂಬಣ್ಣ ಅರೋಲಿಕರ್ ಮಾತನಾಡಿ, ಒಳ ಮೀಸಲಾತಿ ಹೋರಾಟ ಕೇವಲ ಮಾದಿಗ ಸಮುದಾಯದಲ್ಲ ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳ ಹೋರಾಟವಾಗಿತ್ತು ಇದೀಗ ಹೋರಾಟಕ್ಕೆ ಪ್ರತಿಲ ಸಿಕ್ಕಂತಾಗಿದೆ ಎಂದರು.
ಚಲವಾದಿ ಸಮಾಜದ ಪ್ರಮುಖ ರವೀಂದ್ರನಾಥ ಪಟ್ಟಿ ಮಾತನಾಡಿ, ಜಿಲ್ಲೆಯ ಮಾದಿಗ ಸಮುದಾಯಕ್ಕೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ, ಕಳೆದ 30 ವರ್ಷಗಳಿಂದ ನಡೆದ ಒಳಮೀಸಲಾತಿ ಹೋರಾಟಕ್ಕೆ ಸಂದ ಜಯವಾಗಿದೆ. ಸಂಘಟನೆಯ ನಿರಂತರ ಹೋರಾಟಕ್ಕೆ ಮನ್ನಣೆ ನೀಡಿರುವುದು ಸಂತಸ ತಂದಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಎನ್.ಶಂಕ್ರಪ್ಪ, ಪ್ರಮುಖರಾದ ರವೀಂದ್ರ ಜಲ್ದಾರ್, ನರಸಿಂಹ ನಾಯಕ, ತಿಮಪ್ಪ ನಾಯಕ ಸೇರಿದಂತೆ ಇತರರಿದ್ದರು.