ಸಾಲಮನ್ನಾ ಅಸ್ಪಷ್ಟ; ನ.12 ರಂದು ವಿಧಾನಸೌಧ ಮುತ್ತಿಗೆಗೆ ರೈತ ಸಂಘ, ಹಸಿರು ಸೇನೆ ನಿರ್ಧಾರ

<ರೈತ ಸಂಘದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿಕೆ>

ರಾಯಚೂರು: ರೈತರ ಸಾಲ ಮನ್ನಾ ಕುರಿತು ಸರ್ಕಾರ ಸ್ಪಷ್ಟತೆ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.12ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಸಾಲಮನ್ನಾ ಕುರಿತಂತೆ ಸಿಎಂ ಕುಮಾರಸವಾಮಿ ಗೊಂದಲದ ಹೇಳಿಕೆ ನೀಡುವ ಮೂಲಕ ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಬರದಿಂದ ತತ್ತರಿಸಿರುವ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ನ.1ರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಪ್ರಕ್ರಿಯೆ ಆರಂಭಿಸುವುದಾಗಿ ಸಿಎಂ ಹೇಳುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಪಡೆದವರ ವಿವರ ನೀಡುತ್ತಿಲ್ಲ. ಬಿಜೆಪಿ ನಾಯಕರು ವಿವರ ಕೊಡಿಸಲು ಸಹಕಾರ ನೀಡಬೇಕು ಎನ್ನುತ್ತಿದ್ದಾರೆ. ನಾಲ್ಕು ತಿಂಗಳಿಂದ ಸಾಲ ಪಡೆದವರ ವಿವರ ಪಡೆಯದೆ ಹೇಗೆ ಸುಮ್ಮನಿದ್ದರು ಎನ್ನುವುದು ಪ್ರಶ್ನೆಯಾಗಿದೆ ಎಂದು ಕುಟುಕಿದರು.

 

ತುಂಗಭದ್ರಾ ಎಡದಂಡೆ ಕಾಲುವೆ ಕೊನೆಯ ಸಿರವಾರ ವಿಭಾಗಕ್ಕೆ ನೀರು ಬಂದಿಲ್ಲ. ಆದರೆ, ನೀರಾವರಿ ಪ್ರದೇಶ ಎಂದು ರೈತರಿಂದ ಬರ ಪರಿಹಾರಕ್ಕಾಗಿ ಅರ್ಜಿ ಪಡೆದುಕೊಳ್ಳುತ್ತಿಲ್ಲ. ತೆಲಂಗಾಣದಂತೆ ರಾಜ್ಯದಲ್ಲೂ ಎಕರೆಗೆ 10 ಸಾವಿರ ರೂ.ನಂತೆ ಪರಿಹಾರ ನೀಡಬೇಕು. ಸರ್ಕಾರ ಮೇವು ಸಾಗಣೆ ವೆಚ್ಚ ಭರಿಸಲು ಮುಂದಾಗಬೇಕು. ಬೇರೆ ರಾಜ್ಯದಿಂದ ಮೇವು ತಂದು ಕೆಜಿಗೆ ಇಂತಿಷ್ಟು ಎಂದು ರೈತರಿಂದ ಹಣ ಪಡೆದು ನೀಡುವುದನ್ನು ನಿಲ್ಲಿಸಬೇಕು. 2016ರಲ್ಲಿ ಫಸಲ್ ಬಿಮಾ ಯೋಜನೆಗೆ ಹಣ ನೀಡಿದ ರೈತರಿಗೆ ಪರಿಹಾರ ನೀಡಬೇಕು. ಎನ್‌ಆರ್‌ಬಿಸಿಯಿಂದ ಗಣೇಕಲ್ ಜಲಾಶಯಕ್ಕೆ ಲಿಂಕ್ ಕಾಲುವೆ ನಿರ್ಮಾಣ ಮಾಡುತ್ತಿರುವುದು ಸಮಂಜಸವಲ್ಲ. 95ನೇ ಮೈಲ್‌ವರೆಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಇರುವ ಕಾಲುವೆ ಆಧುನೀಕರಣಗೊಳಿಸಬೇಕಾಗಿದೆ. ಕುಡಿವ ನೀರಿಗೆ ಅವಶ್ಯವಿದ್ದಲ್ಲಿ ಗೂಗಲ್ ಜಲಾಶಯದಿಂದ ಪೈಪ್‌ಲೈನ್ ಮೂಲಕ ಗಣೇಕಲ್ ಜಲಾಶಯಕ್ಕೆ ನೀರು ಹರಿಸಬೇಕು ಎಂದು ಹೇಳಿದರು.

ಮುಖಂಡರಾದ ಲಕ್ಷ್ಮಣಗೌಡ ಕಡಗಂದೊಡ್ಡಿ, ಅಮರಣ್ಣ ಗುಡಿಹಾಳ, ಬಸವರಾಜ ಮಾಲಿಪಾಟೀಲ್, ಸೂಗೂರಯ್ಯಸ್ವಾಮಿ, ದೊಡ್ಡ ಬಸನಗೌಡ, ವಿಶ್ವನಾಥ ರೆಡ್ಡಿ ಜಿನೂರು, ದೇವರಾಜ ನಾಯಕ, ಜಯಪ್ಪ ಸ್ವಾಮಿ, ಮಲ್ಲಿಕಾರ್ಜುನ ಸತ್ಯಂಪೇಟೆ, ನಾರಾಯಣಪ್ಪ, ನಾಗರತ್ನಮ್ಮ, ಚಂದ್ರಕಲಾ ಇದ್ದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 40 ಸಾವಿರ ಕೋಟಿ ರೂ. ರೈತರ ಸಾಲವಿದ್ದರೆ, ಸಿಎಂ 6,500 ಕೋಟಿ ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಈ ಹಣವನ್ನು ಹೇಗೆ ಹಂಚಿಕೆ ಮಾಡುತ್ತೀರಿ, ಯಾವ ರೈತರಿಗೆ ಸೌಲಭ್ಯ ಸಿಗಲಿದೆ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ ಸಾಲ ಮನ್ನಾದಿಂದ ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ. ಕುಮಾರಸ್ವಾಮಿ ಮಾಡಿರುವ ಸಾಲಮನ್ನಾಲ್ಲಿ ಸ್ಪಷ್ಟತೆ ಇಲ್ಲ. ಇದರಿಂದ ರೈತರಿಗೆ ತೀವ್ರ ಗೊಂದಲವಾಗಿದೆ.
| ಚಾಮರಸ ಮಾಲಿಪಾಟೀಲ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ