ರಾಯಚೂರು: ರಾಯಚೂರು ವಿಶ್ವವಿದ್ಯಾಲಯದ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಒತ್ತಾಯಿಸಿದ್ದಾರೆ.
ಅಧಿವೇಶನದಲ್ಲಿ ಬಸನಗೌಡ ದದ್ದಲ್ ಮಾತನಾಡಿ, ವಿವಿ ಕಾರ್ಯಾರಂಭದ ನಂತರ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಹಾಗೂ ಮೂಲ ಸೌಕರ್ಯ ಕಲ್ಪಿಸದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದರು. ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಉತ್ತರಿಸಿ, ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ 26 ಬೋಧಕೇತರ ಸಿಬ್ಬಂದಿ ವಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2019ರಲ್ಲಿ 2.20 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಗುಲ್ಬರ್ಗ ವಿವಿಯಿಂದ 50 ಲಕ್ಷ ರೂ.ಯನ್ನು ರಾಯಚೂರು ವಿವಿಗೆ ನೀಡಲಾಗಿದೆ. 2021-22ನೇ ಸಾಲಿನಲ್ಲಿ ವಿವಿಗೆ 50 ಲಕ್ಷ ರೂ. ಮಂಜೂರಾಗಿದ್ದು, ಅದರಲ್ಲಿ 12.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ವಿವಿಯಿಂದ ಆಡಳಿತ ನಡೆಸಲು ಕನಿಷ್ಠ 30 ಕೋಟಿ ರೂ. ಮಂಜೂರು ಮಾಡುವಂತೆ ಪ್ರಸ್ತಾವನೆ ಬಂದಿದೆ. ತುರ್ತಾಗಿ ಅಗತ್ಯವಿರುವ 60 ಬೋಧಕೇತರ ಹುದ್ದೆಗಳನ್ನು ಹೊರಗುತ್ತಿಗೆಯಡಿ ಭರ್ತಿ ಮಾಡಿಕೊಳ್ಳಲು ಪ್ರಸ್ತಾವನೆ ಬಂದಿದೆ ಎಂದು ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.