ರಾಯಚೂರು: ರಾಯಚೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿನ ಅವ್ಯವಸ್ಥೆ, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ರಾಯಚೂರು ವಿವಿ ಕುಲಸಚಿವರ ಪರಿಶೀಲನೆ ವೇಳೆ ಹೊರಬಿದ್ದಿದೆ.
ರಾಯಚೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಒಟ್ಟು 194 ಕಾಲೇಜುಗಳಿದ್ದು, ಅದರಲ್ಲಿ 20 ಸರ್ಕಾರಿ ಹಾಗೂ ಎಂಟು ಅನುದಾನಿತ ಕಾಲೇಜುಗಳಿವೆ. ಉಳಿದ 166 ಖಾಸಗಿ ಕಾಲೇಜುಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.
ಸರ್ಕಾರದ ನಿಯಮದ ಪ್ರಕಾರ ವಿವಿಯ ಸಂಯೋಜಿತ ಕಾಲೇಜುಗಳು ಗುಣಮಟ್ಟದ ಬೋದನೆ ಮೂಲಕ ಉತ್ತಮ ಶಿಕ್ಷಣ, ಕಲಿಕೆಗೆ ಅವಶ್ಯವಿರುವ ವಾತಾವರಣ ನಿರ್ಮಾಣ ಮಾಡುವ ಹಾಗೂ ಮೂಲಭೂತ ಸೌಲಭ್ಯಗಳನ್ನು ಹೊಂದಿರಲೇ ಬೇಕಾಗಿದ್ದು, ಆದರೆ ವಿವಿ ವ್ಯಾಪ್ತಿಯ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಈ ಸೌಲಭ್ಯಗಳಿಲ್ಲದಿರುವುದು ಸ್ಪಷ್ಟವಾಗಿದೆ.
ರಾಯಚೂರು ವಿವಿಯ ಮೌಲ್ಯಮಾಪನ ಕುಲಸಚಿವರು, ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರು ಹಾಗೂ ವಿವಿಯ ಅಭಿಯಂತರರು ಸೇರಿ ಅ.22 ಹಾಗೂ 23ರಂದು ಯಾದಗಿರಿಯ 6 ಹಾಗೂ ರಾಯಚೂರು ಜಿಲ್ಲೆಯ 5 ಮಹಾವಿದ್ಯಾಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನಿಡಿದ್ದು ಕಾಲೇಜುಗಳಲ್ಲಿ ಅವ್ಯವಸ್ಥೆ ಕಂಡುಬಂದಿದೆ.
ಪರಿಶೀಲನೆ ನಡೆಸಿದ ಕಾಲೇಜುಗಳಲ್ಲಿ ವರ್ಗಗಳ ವೇಳಾಪಟ್ಟಿ, ವಿದ್ಯಾರ್ಥಿಗಳ, ಶಿಕ್ಷಕರ ಹಾಜರಾತಿ ಪುಸ್ತಕಗಳು, ಶಿಕ್ಷಕ, ಶಿಕ್ಷಕೇತರರ ವೇತನ ದಾಖಲಾತಿ, ಲೈಬ್ರೆರಿ, ಪ್ರಯೋಗಲಯ, ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಬೋದಕರೇ ಇಲ್ಲದಿರುವುದು ಕಂಡುಬಂದಿದೆ.
ರಾಯಚೂರು ವಿವಿಯಿಂದ ನಡೆಸಲಾದ ಪರಿಶೀಲನೆ ವೇಳೆ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಬೋದಕರಿಗೆ ಇಂಗ್ಲಿಷ್ ಪದಗಳ ಸ್ಪೆಲಿಂಗ್ ಬಾರದೇ ಇರುವುದು ಪರಿಶೀಲನಾ ತಂಡ ವರದಿ ದಾಖಲಿಸಿಕೊಂಡಿದೆ.
ಅವ್ಯವಸ್ಥೆಯಿಂದ ಕೂಡಿದ ಕಾಲೇಜುಗಳಿಗೆ ವಿಶ್ವವಿದ್ಯಾಲಯದಿಂದ ನೋಟಿಸ್ ನೀಡಲಾಗಿದೆ. ಆದರೆ 11 ಜನರಲ್ಲಿ 10 ಜನರು ನೋಟಿಸ್‌ಗೆ ಒಂದೇ ಮಾದರಿಯ ಉತ್ತರ ನೀಡಿದ್ದಾರೆ. ಹಂತ ಹಂತವಾಗಿ ವಿಶ್ವವಿದ್ಯಾಲಯದಿಂದ ಕಾಲೇಜುಗಳ ಪರಿಶೀಲನೆ ಮಾಡಲಾಗುವುದು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ವಿವಿಯ ವ್ಯಾಪ್ತಿಯಲ್ಲಿನ ಬಹುತೇಕ ಕಾಲೇಜುಗಳಲ್ಲಿ ಪ್ರವೇಶಗಳಿಗೆ ಒತ್ತು ನೀಡುತ್ತಿದ್ದು, ವೈಯಕ್ತಿಕ ಅಭಿವೃದ್ಧಿಗೆ ಇದ್ದಷ್ಟು ಆಸಕ್ತಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ. ಶೀಘ್ರವೇ ಹಂತ ಹಂತವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
| ಡಾ.ಶಂಕರ ವಣಕ್ಯಾಳ, ಕುಲಸಚಿವರು(ಆಡಳಿತ), ರಾಯಚೂರು ವಿವಿ.