ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಹೇಳಿಕೆ
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿ ತಡೆಗಟ್ಟಿ ಕಾಲುವೆ ಕೆಳಭಾಗಕ್ಕೆ ನೀರು ಹರಿಸದಿದ್ದಲ್ಲಿ ಜಿಲ್ಲೆಯ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಟಿಎಲ್‌ಬಿಸಿ ಕೊನೇ ಭಾಗಕ್ಕೆ ನೀರು ಹರಿಸದಿರುವ ಕಾರಣ ಜಿಲ್ಲೆಯ ಭತ್ತ, ಹತ್ತಿ ಸೇರಿ ಕೃಷಿ ಆಧಾರಿತ ಉದ್ಯಮಗಳು ಸಂಕಷ್ಟಕ್ಕೆ ಗುರಿಯಾಗುತ್ತಿವೆ. ಟಿಎಲ್‌ಬಿಸಿ ನೀರು ನಿರ್ವಹಣೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ವಡ್ಡರಹಟ್ಟಿ, ಸಿಂಧನೂರು ವಿಭಾಗದ ಅಚ್ಚುಕಟ್ಟು ಪ್ರದೇಶದಲ್ಲಿ 2 ಲಕ್ಷ ಎಕರೆಗೆ ಅಕ್ರಮವಾಗಿ ನೀರು ಪಡೆಯುತ್ತಿರುವುದರಿಂದ ಕೆಳಭಾಗಕ್ಕೆ ನೀರು ತಲುಪದಂತಾಗಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ರೈತರ ನಿಯೋಗ ಭೇಟಿಯಾದಾಗ ಪೊಲೀಸ್ ರಕ್ಷಣೆ ಪಡೆದು ಅಕ್ರಮವಾಗಿ ನೀರು ಪಡೆಯುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಅಕ್ರಮವಾಗಿ ನೀರು ಪಡೆಯುವವರ ವಿರುದ್ಧ ಒಂದು ದೂರು ದಾಖಲಿಸಲಾಗಿಲ್ಲ.
ಕಾಲುವೆ ಕೊನೆಯ ಭಾಗಕ್ಕೆ ಒಂದು ಬೆಳೆಗೂ ಸಮರ್ಪಕವಾಗಿ ನೀರು ತಲುಪದಂತಾಗಿದ್ದು, ಇದರಿಂದಾಗಿ ಭತ್ತ, ಹತ್ತಿ ಉತ್ಪಾದನೆ ಕಡಿಮೆಯಾಗಿ ಅಕ್ಕಿಗಿರಣಿ, ಜಿನ್ನಿಂಗ್ ಫ್ಯಾಕ್ಟರಿಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಈ ಉದ್ಯಮಗಳಿಂದ ಸೃಷ್ಟಿಯಾಗಿದ್ದ 30 ಸಾವಿರ ಉದ್ಯೋಗಗಳಿಗೆ ಕುತ್ತು ಬರುವಂತಾಗಿದೆ ಎಂದರು.
ಕಾರಣ ಟಿಎಲ್‌ಬಿಸಿ 69ನೇ ಮೈಲಿನಲ್ಲಿ 9.2 ಅಡಿ ಗೇಜ್ ನಿರ್ವಹಣೆ ಮಾಡುವ ಮೂಲಕ ಬೆಳೆದು ನಿಂತಿರುವ ಹತ್ತಿ, ಮೆಣಸಿನಕಾಯಿ, ಜೋಳದ ಬೆಳೆಗಳಿಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಜಲ ಸಂಪನ್ಮೂಲ ಇಲಾಖೆ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎ.ಪಾಪಾರೆಡ್ಡಿ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳಾದ ನಾಗನಗೌಡ ಹರವಿ, ಜಂಬಣ್ಣ ಯಕ್ಲಾಸಪುರ ಇದ್ದರು.