ರಾಯಚೂರು: ಐದು ತಿಂಗಳ ಸಾದಿಲ್ವಾರು ಹಣ ತಕ್ಷಣ ಬಿಡುಗಡೆ, ಸಕಾಲಕ್ಕೆ ಗೌರವ ಧನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಪ್ರತಿಭಟನೆ ನಡೆಸಿತು.
ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಬುಧವಾರ ಜಮಾಯಿಸಿದ ನೌಕರರು ಅಧಿಕಾರಿಗಳ ಧೋರಣೆ ಖಂಡಿಸಿದರು. ನಂತರ ಸ್ಥಾನಿಕ ಅಧಿಕಾರಿ ಮೂಲಕ ಡಿಸಿ ಬಿ.ಶರತ್ ಅವರಿಗೆ ಮನವಿ ಸಲ್ಲಿಸಿದರು. ಕೆಲ ಶಾಲೆಗಳಲ್ಲಿ ಎಸ್ಡಿಎಂಸಿ ಹಾಗೂ ಮುಖ್ಯಶಿಕ್ಷಕರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಐದು ತಿಂಗಳ ಸಾದಿಲ್ವಾರು, ಸಕಾಲಕ್ಕೆ ಗೌರವ ಧನವೂ ನೀಡದಿದ್ದರೆ ಸಿಲಿಂಡರ್ ಖರೀದಿಸುವುದು ಹೇಗೆ, ತಕ್ಷಣ ಈ ಹಿಂದೆ ಇದ್ದಂತೆ ಅಡುಗೆ ಅನಿಲದ ಸಿಲಿಂಡರನ್ನು ಇಲಾಖೆ ಪೂರೈಸಲಿ, ಸಮಯಕ್ಕೆ ಸರಿಯಾಗಿ ಪಡಿತರ ವಿತರಿಸಬೇಕು, ಶಾಲಾ ಮಕ್ಕಳ ಸಂಖ್ಯೆ ಕಡಿಮೆಯ ನೆಪದಲ್ಲಿ ಅಡುಗೆದಾರರನ್ನು ವಜಾ ಮಾಡದೆ, ಹತ್ತಿರದ ಶಾಲೆಗೆ ನಿಯೋಜಿಸಬೇಕು, ತಲೇಖಾನ್ ಬಿಸಿಯೂಟದ ಸಹಾಯಕಿಯನ್ನು ಪುನರ್ ನೇಮಕ ಮಾಡಿಕೊಳ್ಳುವಂತೆ ನೌಕರರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಚ್.ಪದ್ಮಾ, ಸಿಐಟಿಯು ಪ್ರ.ಕಾ. ಶೇಕ್ಷಾಖಾದ್ರಿ, ಜಿಲ್ಲಾ ಉಪಾಧ್ಯಕ್ಷೆ ವರಲಕ್ಷ್ಮಿ, ಡಿ.ಎಸ್.ಶರಣಬಸವ, ಎಂ.ಡಿ.ಹನೀಫ್, ಅಕ್ಕಮ್ಮ, ಕಲ್ಯಾಣಿ, ಮರಿಯಮ್ಮ, ನಾಗಮ್ಮ, ನಾಗರತ್ನ, ಈಶ್ವರಮ್ಮ, ರೇಣುಕಾ, ರಜಿಯಾ, ಶಕುಂತಲಾ, ಉಮಾ ಇತರರಿದ್ದರು.