ಶಿಕ್ಷಕರ ನೇಮಕದಲ್ಲಿ ಹೈಕಕ್ಕೆ ವಂಚಿಸುವ ಹುನ್ನಾರ – ಡಾ.ರಜಾಕ್ ಉಸ್ತಾದ್ ಆರೋಪ

ರಾಯಚೂರು: ಸರ್ಕಾರ ಪದವೀಧರ ಶಿಕ್ಷಕರ (10,611 ಹುದ್ದೆ)ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, 2017ರ ನೇಮಕ ನಿಯಮಗಳನ್ನು ಮುಂದುವರೆಸಿರುವುದು ಹೈಕ ಭಾಗಕ್ಕೆ ವಂಚಿಸುವ ಸಂಚು ಕಂಡು ಬರುತ್ತಿದೆ ಎಂದು ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಹೇಳಿದರು.

ಬಿ.ಇಡಿ ಮಾಡುವಾಗ ಇರದ ನಿಯಮಗಳನ್ನು ನೇಮಕ ಸಂದರ್ಭದಲ್ಲಿ ಅಳವಡಿಸುವ ಮೂಲಕ ಯಾರೂ ಅರ್ಜಿ ಸಲ್ಲಿಸದಂತೆ ಮಾಡುವ ಹುನ್ನಾರ ಅಡಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. 2017ರಲ್ಲಿ 10 ಸಾವಿರ ಪದವೀಧರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಗಣಿತ, ವಿಜ್ಞಾನ, ಸಮಾಜಪಾಠ, ಆಂಗ್ಲ ವಿಷಯಗಳ ನೇಮಕ ನಡೆಸಲಾಗಿತ್ತು. ನೇಮಕ ಸಂದರ್ಭದಲ್ಲಿ ಅನಗತ್ಯ ನಿಯಮಗಳನ್ನು ಅಳವಡಿಸಿ ಅನರ್ಹರನ್ನಾಗಿ ಮಾಡಲಾಗಿತ್ತು. ಇದರಿಂದ 10 ಸಾವಿರ ಹುದ್ದೆಗಳಲ್ಲಿ ಕೇವಲ 3 ಸಾವಿರ ಅಭ್ಯರ್ಥಿಗಳು ನೇಮಕವಾಗಿದ್ದಾರೆ. ಹೈಕ ಭಾಗದ 4 ಸಾವಿರ ಹುದ್ದೆಗಳ ನೇಮಕದಲ್ಲಿ ಕೇವಲ 763 ಅಭ್ಯರ್ಥಿಗಳು ನೇಮಕವಾಗಿದ್ದಾರೆ. ಈ ಕುರಿತು ಸಿಎಂ ಗಮನಕ್ಕೆ ತಂದಾಗ ಮುಂದಿನ ನೇಮಕದಲ್ಲಿ ನಿಯಮ ಸಡಿಲಿಸುವ ಭರವಸೆ ನೀಡಿದ್ದರು ಎಂದರು.

ಸರ್ಕಾರ ಈಗ ಮತ್ತೊಮ್ಮೆ ಪದವೀಧರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಹೈಕ ಭಾಗದ 5 ಸಾವಿರ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಆದರೆ ಈಗಲೂ 2017ರ ನಿಯಮಗಳನ್ನು ಮುಂದುವರೆಸಿದ್ದರಿಂದ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗುವಂತಾಗಿದೆ.

ಹೈಕ ಭಾಗದಲ್ಲಿ ಖಾಲಿ ಹುದ್ದೆಗಳ ಕುರಿತು ವಿವಿಧ ಹಂತದಲ್ಲಿ ಬೇರೆ ಬೇರೆ ಸಂಖ್ಯೆಗಳನ್ನು ನೀಡಿ ಜನರನ್ನು ಮೂರ್ಖರನ್ನಾಗಿಸಲಾಗುತ್ತಿದೆ. 2018ರ ಜೂನ್‌ನಲ್ಲಿ ನಡೆದ ಅತಿಥಿ ಶಿಕ್ಷಕರ ನೇಮಕದಲ್ಲಿ 12,477 ಹುದ್ದೆಗಳು ಖಾಲಿ ಇವೆ ಎಂದು ತೋರಿಸಲಾಗಿತ್ತು. ಡಿಸೆಂಬರ್‌ನಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಕೇವಲ 29 ಹುದ್ದೆಗಳು ಖಾಲಿ ಇವೆ ಎಂದು ತೋರಿಸಿದ್ದಾರೆ.

2019ರ ಜನವರಿಯಲ್ಲಿ ಇಲಾಖೆ ಅಧಿಕಾರಿಗಳು ಹೈಕ ಭಾಗದಲ್ಲಿ ಕೇವಲ 7,845 ಖಾಲಿ ಹುದ್ದೆಗಳಿವೆ ಎಂದು ತೋರಿಸಿದ್ದು, ಈಗ 5 ಸಾವಿರ ಹುದ್ದೆಗಳಿಗೆ ನೇಮಕ ನಡೆಸಲಾಗುತ್ತಿದೆ. ಈ ರೀತಿಯ ವೃಂದ ಮತ್ತು ನೇಮಕ ನಿಯಮ ರಚಿಸುವ ಬದಲು ನಿಯಮಗಳನ್ನು ಮೊದಲಿನಂತೆ ಮುಂದುವರೆಸಿ ಟಿಇಟಿ ಪಾಸಾದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಪರಿಗಣಿಸಬೇಕು ಎಂದು ಡಾ.ರಜಾಕ್ ಉಸ್ತಾದ್ ಒತ್ತಾಯಿಸಿದರು. ಸಮಿತಿ ಪದಾಧಿಕಾರಿಗಳಾದ ವೆಂಕಟೇಶ ಯಾದವ್, ಮಹ್ಮದ್ ರಫಿ, ಮುನಿಯಪ್ಪ ಇತರರಿದ್ದರು.