ಗಂಭೀರ ಸ್ವರೂಪ ಪಡೆದ ಪ್ರತಿಭಟನೆ, ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು ಪ್ರಕರಣ; ಕಲ್ಲು, ಚಪ್ಪಲಿ ತೂರಾಟ, ಒಬ್ಬರಿಗೆ ಗಾಯ, ಸೀಮೆಎಣ್ಣೆ ಸುರಿದಕೊಂಡ ವ್ಯಕ್ತಿ ಅಸ್ವಸ್ಥ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಶಂಕಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತವಾಗಿ ಸಿಐಡಿ ತನಿಖೆ ನಡೆಯುವ ಮೂಲಕ ಉಳಿದ ಆರೋಪಿಗಳನ್ನು ಬಂಧಿಸಬೇಕೆಂದು ಎಂದು ಒತ್ತಾಯಿಸಿ ಜಿಲ್ಲಾ ವಿಶ್ವಕರ್ಮ ಸಮುದಾಯ, ಎಬಿವಿಪಿ ಸೇರಿ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ನಗರದ ಮಾಣಿಕ ಪ್ರಭು ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಡಿಸಿ ಬಿ.ಶರತ್ ಮತ್ತು ಎಸ್ಪಿ ಡಿ.ಕಿಶೋರಬಾಬುಗೆ ಮನವಿ ಸಲ್ಲಿಸಲಾಯಿತು.

ಡಿಸಿ ಕಚೇರಿ ಮುಂಭಾಗ ಜಮಾಯಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಮುಚ್ಚಿದ್ದ ಗೇಟ್ ದೂಡಿಕೊಂಡು ಒಳಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆದು ಲಾಠಿ ತೋರಿಸಿ ಎಲ್ಲರನ್ನು ಗೇಟ್ ಹೊರಗೆ ನಿಲ್ಲಿಸಿದರು. ಈ ಸಂದರ್ಭ ವಿದ್ಯಾರ್ಥಿಗಳು ಚಪ್ಪಲಿ, ನೀರಿನ ಪಾಕೆಟ್, ಧ್ವಜದ ಪ್ಲಾಸ್ಟಿಕ್ ಪೈಪ್‌ಗಳ ತೂರಾಟ ನಡೆಸಿದರು. ಡಿಸಿ ಮತ್ತು ಎಸ್ಪಿ ಮನವಿ ಸ್ವೀಕರಿಸುವವರೆಗೂ ಇದು ಮುಂದುವರಿದಿತ್ತು. ಈ ಸಂದರ್ಭ ಕಿಡಿಕೇಡಿಯೊಬ್ಬ ತೂರಿದ ಕಲ್ಲು ತಲೆಗೆ ಬಡಿದು ವಿಶ್ವಕರ್ಮ ಸಮುದಾಯದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮ ಗಾಯಗೊಂಡರು. ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಅಸ್ವಸ್ಥರಾದ ಸಮುದಾಯದ ಜಿಲ್ಲಾ ಉಪಾಧ್ಯಕ್ಷ ಮಾರುತಿ ಬಡಿಗೇರರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ವಿಶ್ವಕರ್ಮ ಪೀಠದ ಶಿವಕುಮಾರ ಸ್ವಾಮೀಜಿ, ಸಮುದಾಯದ ಪ್ರಮುಖರಾದ ಈಶ್ವರ ವಿಶ್ವಕರ್ಮ, ಕೆ.ಲಕ್ಷ್ಮಿಪತಿ, ಗಿರೀಶ್ ಆಚಾರ್ಯ, ಮೃತ ವಿದ್ಯಾರ್ಥಿನಿ ಪಾಲಕರು, ಎಬಿವಿಪಿ ಹಾಗೂ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಹರ್ಷಿಕಾ, ಭುವನ್ ಬೆಂಬಲ
ಪ್ರತಿಭಟನೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ, ನಟ ಭುವನ್ ಪಾಲ್ಗೊಂಡಿದ್ದರು. ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಬೇಕು. ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಸಿಬಿಐಗೆ ತನಿಖೆ ವಹಿಸುವ ಮೂಲಕ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವ ಕೆಲಸವಾಗಬೇಕು ಎಂದರು.

ಬೆಂಬಲ ನೀಡಿದ ವ್ಯಾಪಾರಸ್ಥರು
ಚಿನ್ನಾಭರಣ ಮಾರಾಟ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ವ್ಯಾಪಾರಿಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ನಗರದಲ್ಲಿನ 100ಕ್ಕೂ ಚಿನ್ನಾಭರಣ ಅಂಗಡಿಗಳು, ಅಕ್ಕಸಾಲಿಗರು ವ್ಯಾಪಾರ, ಕೆಲಸ ಕಾರ್ಯ ಸ್ಥಗಿತಗೊಳಿಸಿದರು. ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸರಾಪ್ ಮರ್ಚೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್‌ನಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಲಾಯಿತು. ಸಂಘದ ಅಧ್ಯಕ್ಷ ಗದ್ವಾಲ್ ನರಸಣ್ಣ, ಪದಾಧಿಕಾರಿಗಳಾದ ಕೂರ ಅಶೋಕ, ಆರ್.ಗೋಪಾಲ ಶೆಟ್ಟಿ, ವೀರಭದ್ರಪ್ಪ ಅಂತರಗಂಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *