ಅಮೃತಮಹಲ್ ಜಂಟಿ ನಿರ್ದೇಶಕರ ಕಚೇರಿ ಎತ್ತಂಗಡಿ

ಬೀರೂರು: ಅಮೃತಮಹಲ್ ತಳಿ ಸಂವರ್ಧನೆಗಾಗಿ ಬೀರೂರು ತಳಿ ಸಂವರ್ಧನಾ ಕೇಂದ್ರದಲ್ಲಿ ಆರಂಭಿಸಲಾಗಿದ್ದ ಜಂಟಿ ನಿರ್ದೇಶಕರ ಕಚೇರಿಯನ್ನು ಕಲಬುರಗಿ ವಿಭಾಗದ ರಾಯಚೂರಿಗೆ ಸ್ಥಳಾಂತರಿಸಲು ಸರ್ಕಾರ ಆದೇಶಿಸಿದೆ. ಹೀಗಾಗಿ ಅಮೃತಮಹಲ್ ಮತ್ತು ಹಳ್ಳಿಕಾರ್ ತಳಿಗಳ ಅಭಿವೃದ್ಧಿ ಮತ್ತು ಇಲಾಖಾ ಕೆಲಸಗಳಿಗೆ ಹಿನ್ನಡೆ ಉಂಟಾಗುವುದು ಖಚಿತ.

2013-14ನೇ ಸಾಲಿನಲ್ಲಿ ಆರಂಭವಾದ ಜಂಟಿನಿರ್ದೇಶಕರ ಕಚೇರಿಯು ಅಜ್ಜಂಪುರ, ಬಾಸೂರು, ಹಬ್ಬನಘಟ್ಟ, ರಾಮಗಿರಿ, ಕುಣಿಕೇನಹಳ್ಳಿ, ಲಿಂಗದಹಳ್ಳಿ, ಚಿಕ್ಕೆಮ್ಮಿಗನೂರು ಮತ್ತು ರಾಯಸಂದ್ರ ತಳಿ ಸಂವರ್ಧನಾ ಕೇಂದ್ರಗಳನ್ನು ಒಳಗೊಂಡಂತೆ ಕೆಲಸ ನಿರ್ವಹಿಸುತ್ತಿದೆ. ರಾಜ್ಯದ ಈಗಿನ ಮೈತ್ರಿ ಸರ್ಕಾರ ಆರಂಭವಾದ ಹೊಸತರಲ್ಲೇ ಪಶುಸಂಗೋಪನಾ ಇಲಾಖೆ ಸಚಿವರ ನಿರ್ದೇಶನದಂತೆ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸುವ ನಿರ್ಧರಿಸಲಾಗಿದೆ. ಇದರಿಂದ ಸ್ಥಳೀಯವಾಗಿ ಆಗುತ್ತಿದ್ದ ಕೆಲಸಗಳು ಮತ್ತು ನಿರ್ಧಾರಗಳಿಗೆ ಬ್ರೇಕ್ ಬೀಳಲಿದೆ. ಪ್ರತಿಯೊಂದು ತೀರ್ವನಕ್ಕೂ ವಿಭಾಗೀಯ ನಿರ್ದೇಶಕರ ಕಚೇರಿಯನ್ನು ಅವಲಂಬಿಸಬೇಕಾಗುತ್ತದೆ.

ಕಚೇರಿ ಸ್ಥಳಾಂತರ ಅಗತ್ಯವೇ?: ತುಮಕೂರು, ಚಿತ್ರದುರ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಮೃತಮಹಲ್ ತಳಿ ಇದ್ದು, ಅವುಗಳ ಅಭಿವೃದ್ಧಿಗಾಗಿ ಸಾವಿರಾರು ಎಕರೆ ಭೂಮಿ ಮೀಸಲಿರಿಸಲಾಗಿದೆ. ಆದರೆ ಸಚಿವರ ನಿರ್ಧಾರದಿಂದ ಕಚೇರಿ ಸ್ಥಳಾಂತರಗೊಂಡರೆ ಕಲಬುರಗಿ ವಿಭಾಗಕ್ಕೆ ಒಂದು ಕಚೇರಿ ದೊರೆತಂತಾಗುತ್ತದೆಯೇ ಹೊರತು ತಳಿ ಸಂವರ್ಧನೆ ಅಥವಾ ಬೇರಾವುದೇ ವಿಷಯದಲ್ಲಿ ಅನುಕೂಲವಾಗದು. ಅಷ್ಟಕ್ಕೂ ಕಲಬುರಗಿ ವಿಭಾಗದಲ್ಲಿ ಕಚೇರಿ ಅಗತ್ಯವಿರುವುದೇ ಹೌದಾದರೆ ಸಚಿವರು ತಮ್ಮ ಅಧಿಕಾರ ಬಳಸಿ ಹೊಸ ಕಚೇರಿ ಆರಂಭಿಸುವುದೂ ಕಷ್ಟದ ವಿಷಯವಲ್ಲ. ಆದರೆ ಈ ಗೋಜಿಗೆ ಹೋಗದೆ ಕಾರ್ಯದೊತ್ತಡ ಇರುವ ಜಂಟಿ ನಿರ್ದೇಶಕರ ಕಚೇರಿಯನ್ನೇ ಅಲ್ಲಿಗೆ ಸ್ಥಳಾಂತರಿಸುವುದರ ಉದ್ದೇಶವಾದರೂ ಏನು ಎಂಬುದು ಯಕ್ಷಪ್ರಶ್ನೆಯಾಗಿದೆ.