ರಾಯಚೂರು: ಸಿಂಧನೂರಿನ ಆಕ್ಸ್‌ಫರ್ಡ್ ಸಮೂಹ ಸಂಸ್ಥೆಗಳಿಂದ ದಿ.ಶೇಷಯ್ಯ ಶ್ರೇಷ್ಠಿ ರವುಡಕುಂದಾ ಸ್ಮರಣಾರ್ಥ ಇಬ್ಬರು ಮಹನೀಯರಿಗೆ ರಾಜ್ಯಮಟ್ಟದ ಮೇರುಜೀವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎನ್.ಸತ್ಯನಾರಾಣ ಶ್ರೇಷ್ಠಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಸೆ.4ರಂದು ಖ್ಯಾತ ನೀರಾವರಿ ಹೈಡ್ರೋ ಇಂಜಿನೀಯರ್ ಕನ್ನಯ್ಯ ನಾಯ್ಡು ಹಾಗೂ ಸೆ.5ರಂದು ಸಾಹಿತಿ ಗಂಗಾವತಿ ಪ್ರಾಣೇಶ್ ಅವರಿಗೆ ಸಂಸ್ಥೆಯ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಮೇರು ಜೀವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಷಡ್ಯಂತ್ರ: ಕೆ.ಶಾಂತಪ್ಪ
ತುಂಗಭದ್ರಾ ಜಲಾಶಯದ 19ನೇ ಗೇಟ್ ಚೈನ್ ಲಿಂಕ್ ಕಟ್ ಆದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಹರಿದು ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಕನ್ನಯ್ಯ ನಾಯ್ಡು ತಂಡ ಕ್ಲಸ್ಟರ್ ಗೇಟ್‌ಗಳನ್ನು ಅಳವಡಿಸುವ ಮೂಲಕ ನೀರಿನ ಹರಿವನ್ನು ಸಿಲ್ಲಿಸಿ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹಾಸ್ಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಂಗಾವತಿಯ ಪ್ರಾಣೇಶ್ ಸಾಧನೆಯನ್ನು ಪರಿಗಣಿಸಿ ಪ್ರಶ್ತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ವಹಿಸಿಕೊಳ್ಳಲಿದ್ದಾರೆ. ನೇತ್ರ ತಜ್ಞ ಡಾ.ಆರ್.ಚನ್ನನಗೌಡ ಪಾಟೀಲ್ ಹಾಗೂ ಬಸವರಾಜ್ ಹಿರೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರವೀಣ ಸೋಲಂಕಿ, ವೀರಭದ್ರಪ್ಪ ಜವಳಗೇರಾ, ಕಿರಣ ಸೋಲಂಕಿ ಸೇರಿದಂತೆ ಇತರರಿದ್ದರು.