ಮೂರು ಕಡೆ ಸರಣಿ ಕಳ್ಳತನ

ರಾಯಚೂರು: ನಗರಕ್ಕೆ ಹೊಂದಿಕೊಂಡಿರುವ ಅಸ್ಕಿಹಾಳದಲ್ಲಿ ದೇವಸ್ಥಾನ, ಬಾರ್ ಮತ್ತು ಡಾಬಾಗಳಲ್ಲಿ ಬುಧವಾರ ತಡರಾತ್ರಿ ಸರಣಿ ಕಳ್ಳತನವಾಗಿದೆ.

ಶ್ರೀ ಮಾರೆಮ್ಮ ದೇವಸ್ಥಾನದ ಹುಂಡಿ ಒಡೆದಿರುವ ಕಳ್ಳರು ಹಣ ದೋಚಿದ್ದಾರೆ. ನಂತರ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ದೂರು ದಾಖಲಾಗಿದೆ.

ದೇವಸ್ಥಾನದ ಹುಂಡಿಯಲ್ಲಿ 10-15 ಸಾವಿರ ರೂ. ಕಳವಾಗಿರಬಹುದು. ಉಳಿದ ಎರಡು ಬಾರ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ಹಣ ಕಳ್ಳತನ ಆಗಿಲ್ಲ ಎಂದು ದೂರು ದಾಖಲಿಸಲಾಗಿದೆ. ಕಳ್ಳರ ಪತ್ತೆಗೆ ಜಾಲ ಬೀಸಿದ್ದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ದಿನ ಮೂರು ಕಡೆ ಕಳ್ಳತನ ಆಗಿರುವುದರಿಂದ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.