ರಾಯಚೂರು: ರಾಯಚೂರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಸಮಸ್ಯೆಗಳಿದ್ದು, ಸ್ಪಂಧಿಸದ ಸಚಿವರು, ಶಾಸಕರು ವಿಮಾನ ನಿಲ್ದಾಣ ಕಾಮಗಾರಿಗೆ ಯಾವುದೇ ಸಮಸ್ಯೆಗಳಿಲ್ಲ. ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ದಂಡು ಗ್ರಾಮಸ್ಥ ಸಂತೋಷ ದೀಕ್ಷಿತ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, 1984-85ನೇ ಸಾಲಿನಲ್ಲಿ ಜಿಲ್ಲಾಡಳಿತದಿಂದ ದಂಡು ಗ್ರಾಮದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ, ಹಕ್ಕು ಪತ್ರವನ್ನು ನಿಡಲಾಗಿದೆ. ಆದರೆ ಇದೀಗ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 108 ಮನೆಗಳನ್ನು ತೆರವುಗೊಳಿಸುವುದಾಗಿ ಜಿಲ್ಲಾಡಳಿತದಿಂದ ನೋಟಿಸ್ ನೀಡಲಾಗಿದೆ. ವೈಜ್ಞಾನಿಕ ಪರಿಹಾರ ಘೊಷಿದೇ, ನಿವೇಶನವನ್ನು ಕಳೆದುಕೊಳ್ಳುವ ನಿವಾಸಿಗಳಿಗೆ ಅಕ್ಕಪಕ್ಕದ ಸರ್ಕಾರಿ ಜಾಗದಲ್ಲಿ ನಿವೇಶನವನ್ನೂ ನೀಡದೇ ಇರುವುದರಿಂದ ಅಲ್ಲಿನ ನಿವಾಸಿಗಳ ಬದುಕು ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅನೇಕ ವರ್ಷಗಳ ಹಿಂದೆಯೇ ವಿಮಾನ ನಿಲ್ದಾಣಕ್ಕಾಗಿ ಸ್ಥಳವನ್ನು ಗುರುತಿಸಲಾಗಿದೆ. ಆದರೆ ಜಿಲ್ಲಾಡಳಿತದಿಂದ ಕಾಮಗಾರಿ ನಕ್ಷೆಯನ್ನು ಬದಲಾವಣೆ ಮಾಡಲಾಗಿದ್ದು, ಇದರಿಂದ ದಂಡು ಗ್ರಾಮದ ನೂರಾರು ಮನೆಗಳು ತೆರವಾಗುತ್ತವೆ. ವಿಮಾನ ನಿಲ್ದಾಣದ ವಿಚಾರವಾಗಿ ಮಾತ್ರ ಸರ್ಕಾರ ಆಲೋಚನೆ ಮಾಡುತ್ತಿದ್ದು, ಆದರೆ ಅಲ್ಲಿರುವ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವ ಮೊದಲು ಸ್ಥಳೀಯ ನಿವಾಸಿಗಳ ವಸತಿಗಾಗಿ ಬೇರೆಡೆ ನಿವೇಶನ ಹಂಚಿಕೆ ಮಾಡಬೇಕು ಮತ್ತು ವಿಮಾನ ನಿಲ್ದಾಣಕ್ಕಾಗಿ ತೆರವಾಗುವ ಮನೆಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾಹುಲ್, ಮಹೇಶ, ಹನುಮೇಶ, ಅಪ್ಸರ್ ಸೇರಿದಂತೆ ಇತರರಿದ್ದರು.