ರಾಯಚೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವಿದ್ಯಾರ್ಥಿಗಳಲ್ಲಿ ಸಂಶೋಧನಾತ್ಮಕ ಶಿಕ್ಷಣವನ್ನು ಬೆಳೆಸಲು ಡಿ.21ರಂದು ವಿಜ್ಞಾನ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎ.ಜೆ ಅಕಾಡೆಮಿ ಸದಸ್ಯ ಸೈಯದ್ ತನ್ವೀರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಎ.ಜೆ ಅಕಾಡೆಮಿ ಫಾರ್ ರಿಸರ್ಚ್ ಮತ್ತು ಡೆವಲಪ್ಮೆಂಟ್ ಹಾಗೂ ವಿವಿಧ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಲಾಗಿರುವ ಮೇಳದಲ್ಲಿ 4ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸುವರು.
ವಿಜ್ಞಾನ ಮೇಳವನ್ನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ. ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಪ್ಲೈಡ್ ಜೆನಿಟಿಕ್ಸ್ ಸಂಯೋಜಕ ಡಾ.ಬಿ.ಸುರೇಶ ಸೇರಿದಂತೆ ಇತರ ಗಣ್ಯರು ಇರಲಿದ್ದಾರೆ ಎಂದು ತಿಳಿಸಿದರು.
ಈ ವಿಜ್ಞಾನ ಮೇಳದಲ್ಲಿ ಭೌತಿಕ ವಿಜ್ಞಾನ, ಜೈವಿಕ ವಿಜ್ಞಾನ ಮತ್ತು ಪರಿಸರ ವಿಜ್ಞಾನ ಎಂಬ ಮೂರು ವಿಭಾಗಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶೋಧನೆ ಆಧಾರಿತ 130 ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಲಿದ್ದಾರೆ. ಅವುಗಳಲ್ಲಿ ವೈಯಕ್ತಿಕ ಹಾಗೂ ಗುಂಪು ಪ್ರಾಜೆಕ್ಟ್ ಗಳು ಸೇರಿರುತ್ತವೆ ಎಂದರು.
ತಜ್ಞರ ಸಮಿತಿಯು ಅತ್ಯುತ್ತಮ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಿ 4 ರಿಂದ 5ನೇ ತರಗತಿಗೆ ಬೆಳೆಯುವ ವಿಜ್ಞಾನಿ, 6ರಿಂದ 8ನೇ ತರಗತಿಗೆ ಉದಯೋನ್ಮಕ ವಿಜ್ಞಾನಿ, 9ರಿಂದ 10ನೇ ತರಗತಿಗೆ ಯುವ ವಿಜ್ಞಾನಿ ಎಂಬ ಗೌರವ ಬಿರುದು ಹಾಗೂ ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸಂಜೆ 5ರಿಂದ 7ರವರೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅಬ್ದುಲ್ ಜಾವೇದ್, ಅಬ್ದುಲ್ ರಹೀಂ, ಆದೀಲ್, ಬಂದೇ ನವಾಜ್, ಅಬ್ದುಲ್ ಅಸೀಬ್ ಸೇರಿದಂತೆ ಇತರರಿದ್ದರು.