ರಾಯಚೂರು: ವೇತನ ಪಾವತಿಯಾಗದಿರುವುದಕ್ಕೆ ನಗರಸಭೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಅಪ್ಸರ್ ಅಲಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ಶುಕ್ರವಾರ ಜರುಗಿದೆ.
ರಾಯಚೂರು ನಗರಸಭೆಯ ವಿದ್ಯುತ್ ನಿರ್ವಹಣೆ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅಪ್ಸರ್ ಕಳೆದ ಏಳು ತಿಂಗಳಿನಿಂದ ವೇತನ ಪಾವತಿಯಾಗಿಲ್ಲದಿರುವ ಕಾರಣಕ್ಕೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಸತಿ ನಿಲಯ ಕಾರ್ಮಿಕರ ಬಾಕಿ ವೇತನ ಪಾವತಿಸಿ
ವಿಷ ಸೇವಿಸಿ ಅಸ್ವಸ್ಥನಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವೇತನವಿಲ್ಲದೇ ಬದುಕು ನಡೆಸುವುದು ಕಷ್ಟಕರವಾಗಿದ್ದು, ಬಾಕಿ ವೇತನ ಪಾವತಿಗಾಗಿ ಅನೇಕ ಬಾರಿ ನಗರಸಭೆ ಪೌರಾಯುಕ್ತರನ್ನು ಭೇಟಿ ಮಾಡಿದ್ದು, ಆದರೆ ಪೌರಾಯುಕ್ತರು ಹಾಗೂ ಇತರೆ ಅಧಿಕಾರಿಗಳು ಈ ಬಗ್ಗೆ ಸ್ಪಂಧನೆ ನೀಡಿಲ್ಲ ಆದ್ದರಿಂದ ಮಾನಸಿಕವಾಗಿ ನೋವಾಗಿದೆ ಎಂದು ಅಪ್ಸರ್ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಘಟನೆಯ ಕುರಿತು ಪೌರಾಯುಕ್ತ ಸ್ಪಷ್ಟನೆ…..
ನಗರಸಭೆಯಿಂದ ಏಜೆನ್ಸಿಗೆ ಎಲ್ಲ ವೇತನವನ್ನು ಪಾವತಿ ಮಾಡಲಾಗಿದೆ. ಹೊಸ ಗುತ್ತಿಗೆ ಏಜೆನ್ಸಿ ಬಂದ ನಂತರ ಒಂದು ತಿಂಗಳ ವೇತನ ಬಾಕಿ ಇದ್ದು, ವೇತನವನ್ನು ಏಜೆನ್ಸಿ ಅವರಿಗೆ ಮಾಡುತ್ತೇವೆ. ಏಜೆನ್ಸಿಯಿಂದ ಗುತ್ತಿಗೆ ನೌಕರರಿಗೆ ಪಾವತಿಯಾಗುತ್ತದೆ. ಅಪ್ಸರ್ ಅಲಿ ಎಂಬ ನೌಕರನಿಗೆ ನಗರಸಭೆಯಿಂದ ನೇರ ಪಾವತಿಯಾಗುವುದಿಲ್ಲ. ಅದಲ್ಲದೇ 20 ವರ್ಷದಿಂದ ನೌಕರರ ವಿದ್ಯುತ್ ನಿರ್ವಹಣೆಗೆ ನಿಗದಿಪಡಿಸಿದ ಐಟಿಐ ಕೋರ್ಸ್ ಮುಗಿಸದೇ ಸೇರಿಕೊಂಡಿದ್ದಾನೆ ಮತ್ತು ಈಗಾಗಲೇ ಸರಿಯಾಗಿ ಕೆಲಸ ನಿರ್ವಹಣೆ ಮಾಡದಿರುವ ಕಾರಣ ನೋಟಿಸ್ ಕೂಡ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೆಮಠ ವಿಜಯವಾಣಿಗೆ ತಿಳಿಸಿದ್ದಾರೆ.