ಜಗತ್ತು ಆಳುವ ಶಕ್ತಿ ಎಲ್ಲರಲ್ಲಿದೆ

ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ರವಿ ಚನ್ನಣ್ಣನವರ್ ಅಭಿಮತ

ರಾಯಚೂರು: ಪ್ರತಿಯೊಬ್ಬರಲ್ಲೂ ಜಗತ್ತನ್ನು ಆಳುವ ಶಕ್ತಿಯಿದ್ದು, ನಮ್ಮಲ್ಲಿರುವ ಶಕ್ತಿ, ಜ್ಞಾನವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅದು ನಿರ್ಧಾರವಾಗುತ್ತದೆ ಎಂದು ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ರವಿ ಚನ್ನಣ್ಣನವರ್ ಹೇಳಿದರು.

ಕೃಷಿ ವಿಜ್ಞಾನಗಳ ವಿವಿ ಪ್ರೇಕ್ಷಾಗೃಹದಲ್ಲಿ ಗುರುವಾರ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮಲ್ಲಿರುವ ಶಕ್ತಿಯನ್ನು ಸಮರ್ಥ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ನಾವು ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಅದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಇನ್ನೊಬ್ಬರಿಗೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಂಡಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ವೈಫಲ್ಯಕ್ಕೆ ಯುವಕರು ಹೆದರಿಕೊಂಡು ಮುಂದಡಿಯಿಡಲು ಹಿಂಜರಿಯುತ್ತಾರೆ. ಆದರೆ, ವೈಫಲ್ಯ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುತ್ತದೆ. ತಪ್ಪುಗಳನ್ನು ತಿದ್ದಿಕೊಂಡು ಮುಂದಡಿಯಿಟ್ಟರೆ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯವಿದೆ. ಶಿಕ್ಷಣ ನಮ್ಮನ್ನು ಗಟ್ಟಿಗೊಳಿಸುತ್ತದೆ ಎನ್ನುವುದನ್ನು ಮರೆಯಬಾರದು. ಜನರು ನೀಡುವ ಗೌರವ, ಅಭಿಮಾನ ನಮ್ಮನ್ನು ಮತ್ತಷ್ಟು ಹೆಚ್ಚಿನ ಕೆಲಸ ಮಾಡಲು ಶಕ್ತಿ ತುಂಬುತ್ತದೆ ಎಂದು ಹೇಳಿದರು.

ಕೃಷಿ ವಿಜ್ಞಾನಗಳ ವಿವಿಯ ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಭೀಮಣ್ಣ, ಡಾ.ಎಂ.ವೀರನಗೌಡ, ಡಾ.ಗುರುರಾಜ ಸುಂಕದ ಇದ್ದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.

ನಾವು ಮಾಡುವ ಕೆಲಸ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡುತ್ತಾರೆ. ಯಾವುದರ ಬಗ್ಗೆ ನಮ್ಮಲ್ಲಿ ಹೆದರಿಕೆಯಿದೆಯೋ ಅದನ್ನು ಕಲಿತುಕೊಳ್ಳುವ ತಪನದೊಂದಿಗೆ ಮುಂದುವರಿದಲ್ಲಿ ನಮ್ಮ ಬದುಕಿನ ಸಾಮರ್ಥ್ಯವನ್ನು ನಾವೇ ರೂಪಿಸಿಕೊಳ್ಳಬಹುದಾಗಿದೆ. ಯುವಕರು ತಮ್ಮಲ್ಲಿರುವ ದೌರ್ಬಲ್ಯ ಮತ್ತು ಸಾಮರ್ಥ್ಯ ಏನು ಅನ್ನುವುದನ್ನು ಅರಿತುಕೊಂಡು ಸಾಮರ್ಥ್ಯಕ್ಕೆ ಹೆಚ್ಚಿನ ಫೋಕಸ್ ಮಾಡಿದರೆ ನಮ್ಮ ಕನಸು ನನಸಾಗುವುದು ಅಸಾಧ್ಯವಲ್ಲ.
|ರವಿ ಚನ್ನಣ್ಣನವರ್ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ