ಹಳಿ ತಪ್ಪಿದ ಕಲ್ಲಿದ್ದಲು ಸಾಗಿಸುವ ರೈಲು

ರಾಯಚೂರು: ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಆವರಣದಲ್ಲಿ ಕಲ್ಲಿದ್ದಲು ಸಾಗಿಸುವ ರೈಲು ಮಂಗಳವಾರ ಹಳಿ ತಪ್ಪಿದ್ದು, ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ಕೇಂದ್ರಕ್ಕೆ ಪ್ರತಿನಿತ್ಯ ಐದಾರು ರೇಕ್‌ಗಳ ಕಲ್ಲಿದ್ದಲು ಬರುತ್ತಿದ್ದು, ಮಹಾನದಿ ಕೋಲ್ಡ್ ಫೀಲ್ಡ್‌ನಿಂದ ಕೇಂದ್ರಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು ಹಳಿ ತಪ್ಪಿದೆ. ಹೀಗಾಗಿ ವ್ಯಾಗನ್‌ಗಳಿಂದ ಕಾರ್ಮಿಕರ ಮೂಲಕ ಕಲ್ಲಿದ್ದಲು ಇಳಿಸಿ ಸ್ಟಾಕ್ ಯಾರ್ಡ್‌ಗೆ ಸಾಗಿಸಲಾಗುತ್ತಿದೆ.

ಹಳಿ ಜಖಂಗೊಂಡಿರುವುದರಿಂದ ದುರಸ್ತಿಗೆ ಒಂದೆರಡು ದಿನಗಳು ಬೇಕಾಗಲಿದೆ ಎಂದು ಆರ್‌ಟಿಪಿಎಸ್ ಅಧಿಕಾರಿಗಳು ತಿಳಿಸುತ್ತಿದ್ದು, ಸ್ಟಾಕ್ ಯಾರ್ಡ್‌ನಲ್ಲಿ ಕಲ್ಲಿದ್ದಲು ಸಂಗ್ರಹ ಇರುವುದರಿಂದ ವಿದ್ಯುತ್ ಉತ್ಪಾದನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತಿದೆ.