ಆರ್‌ಟಿಇ ಶುಲ್ಕ ಮರು ಪಾವತಿಗೆ ವಿಳಂಬ

ಸರ್ಕಾರದ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಬೇಸರ | 12.20 ಕೋಟಿ ರೂ. ಶೀಘ್ರ ಸಂದಾಯಕ್ಕೆ ಒತ್ತಾಯ

ರಾಯಚೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಜಿಲ್ಲೆಯ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ನೀಡಿದ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಸಕಾಲಕ್ಕೆ ಮರು ಪಾವತಿಸದ ಕಾರಣ ತೊಂದರೆ ಅನುಭವಿಸುವಂತಾಗಿದೆ. ಈ ವರ್ಷ ಅಂದಾಜು 12.20 ಕೋಟಿ ರೂ. ಪಾವತಿ ಮಾಡಬೇಕಿದೆ ಎಂದು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿಗಳಾದ ಜಯಣ್ಣ, ಮುರಳೀಧರ್ ಕುಲಕರ್ಣಿ ಹೇಳಿದರು.

ಜಿಲ್ಲೆಯಲ್ಲಿ 452 ಅನುದಾನ ರಹಿತ ಶಾಲೆಗಳಿವೆ. ಈ ಪೈಕಿ 283 ಶಾಲೆಗೆ ಮೊದಲ ಕಂತಿನಲ್ಲಿ ಹಣ ಜಮಾ ಆಗಿದೆ. ಉಳಿದ 169 ಶಾಲೆಗಳಿಗೆ 8.80 ಕೋಟಿ ರೂ.ಗಳಲ್ಲಿ 3.30 ಕೋಟಿ ರೂ.ಶುಲ್ಕ ಪಾವತಿಸಿಲ್ಲ. 2ನೇ ಕಂತಿನ ಎಲ್ಲ ಶಾಲೆಗಳಿಗೆ 8.90 ಕೋಟಿ ರೂ.ಸೇರಿ ಒಟ್ಟು 12.20 ಕೋಟಿ ರೂ.ಶುಲ್ಕ ಮರು ಪಾವತಿಸದಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಶಿಕ್ಷಣ ಸಂಸ್ಥೆಗಳು ಸಿಲುಕಿವೆ. ಆದರೆ, ಕೊಡಗು, ಬೆಳಗಾವಿ ವಲಯಕ್ಕೆ 2ನೇ ಕಂತಿನ ಅನುದಾನ ನೀಡಿ, ಹೈಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ವಾರದೊಳಗೆ ಹಣ ಸಂದಾಯ ಆಗದೆ ಹೋದರೆ 2019-20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಆರ್‌ಟಿಇ ಅಡಿ ದಾಖಲಾದ ಮಕ್ಕಳ ಪಾಲಕರಿಂದ ಶುಲ್ಕ ಪಾವತಿಗೆ ಒತ್ತಾಯಿಸುವ ಅನಿವಾರ್ಯತೆ ಎದುರಾಗಲಿದೆ. ಮುಂದಿನ ದಿನಗಳಲ್ಲಿ ಸಕಾಲಕ್ಕೆ ಶುಲ್ಕ ಮರುಪಾವತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಸಂಘದ ಶರ್ಫುದ್ದೀನ್, ಬಲಭೀಮ ಹೂಗಾರ್, ನಾಗರೆಡ್ಡಿ, ಚನ್ನಪ್ಪ ಬೂದಿನಾಳ, ಚಂದ್ರಶೇಖರ್ ಬಲ್ಲಟಗಿ, ರಾಜಾ ಶ್ರೀನಿವಾಸ್ ನಾಯಕ, ಮಲ್ಲನಗೌಡ ಕಾನಿಹಾಳ, ರಾಮಾಂಜನೇಯ, ವೀರೇಶ ಇತರರಿದ್ದರು.

Leave a Reply

Your email address will not be published. Required fields are marked *