ರಸ್ತೆ ವಿಸ್ತರಿಸದೆ ಒಳಚರಂಡಿ ಕಾಮಗಾರಿ – ಜೈ ಕರ್ನಾಟಕ ರಕ್ಷಣಾ ವೇದಿಕೆ ಆರೋಪ

ರಾಯಚೂರು: ನಗರದ ಸ್ಟೇಷನ್ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ನಿರ್ಮಿಸುತ್ತಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಆರೋಪಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರ ಡಿಸಿ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿತು.

ನಗರದ ಸ್ಟೇಷನ್ ವೃತ್ತದ ಬಳಿ ನಿಯಮಾನುಸಾರ ರಸ್ತೆ ವಿಸ್ತರಣೆ ಮಾಡಿಲ್ಲ. ನಗರದ ಪ್ರಮುಖ ವೃತ್ತವಲ್ಲದೆ, ನಗರದಿಂದ ಆಂಧ್ರ ಮತ್ತಿತರ ಪ್ರಮುಖ ನಗರಗಳಿಗೆ ಹಾದು ಹೋಗಲಿರುವ ಏಕೈಕ ರಸ್ತೆ ಆಗಿರುವುದರಿಂದ ವಿಸ್ತರಣೆ ಅವಶ್ಯಕವಾಗಿದೆ.ಆದರೆ, ಬಲ ಹಾಗೂ ಎಡ ಭಾಗದಲ್ಲಿ ಕೆಲ ಖಾಸಗಿ ಕಟ್ಟಡಗಳನ್ನು ತೆರವುಗೊಳಿಸದೆ ರಸ್ತೆಯನ್ನೇ ಒತ್ತಿಕೊಂಡು ನಡೆಯುತ್ತಿರುವ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ವೇದಿಕೆ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ.

ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಒಳಚರಂಡಿ ಕಾಮಗಾರಿ ಸ್ಥಗಿತಗೊಳಿಸಬೇಕು. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ನಿಯಮಾನುಸಾರ ವೃತ್ತದ ಸುತ್ತಲೂ ರಸ್ತೆ ವಿಸ್ತರಣೆಗೊಳಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸ್ಥಾನಿಕ ಅಧಿಕಾರಿ ಮಾತನಾಡಿ, ಈ ಬಗ್ಗೆ ಡಿಸಿ ಅವರ ಗಮನಕ್ಕೆ ತಂದು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ವೇದಿಕೆಯ ಜಿಲ್ಲಾ ಅಧ್ಯಕ್ಷ ಎಚ್.ಅಶೋಕ ಶೆಟ್ಟಿ, ಶರಣಪ್ಪ ಮೇತ್ರಿ, ಪೋಗಲ್ ವೀರೇಶ್, ಕೆ.ಮಾರೆಪ್ಪ, ರಾಜಶೇಖರ್, ಸಂಜೀತ್ ಕುಮಾರ್, ಸಣ್ಣ ಶ್ರೀನಿವಾಸ, ಸುನೀಲ್ ಕುಮಾರ್, ಸಿ.ಜಾನ್, ಚಂದ್ರು ಇತರರಿದ್ದರು.