ಸಕಾರಣವಿಲ್ಲದೆ ಸೇವೆಯಿಂದ ಅಮಾನತು

ಬೀಜ ಘಟಕದ ಡಿಡಿ ವಿ.ರಂಗಸ್ವಾಮಿ ಆರೋಪ |ನಿಗಮದ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು: ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೂ ಕಾರಣವಿಲ್ಲದೆ ರಾಜ್ಯ ಬೀಜ ನಿಗಮ ಮತ್ತು ಸಾವಯವ ಪ್ರಮಾಣಿತ ಸಂಸ್ಥೆ ನಿರ್ದೇಶಕರು ಅಮಾನತು ಮಾಡಿದ್ದು, ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಯಚೂರು ಬೀಜ ಘಟಕದ ಉಪನಿರ್ದೇಶಕ ವಿ.ರಂಗಸ್ವಾಮಿ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಸಕಾರಣವಿಲ್ಲದೆ, ಕೌಟುಂಬಿಕ ಸಮಸ್ಯೆಗಳ ಕುರಿತು ಮನವಿ ಮಾಡಿದರೂ ಲೆಕ್ಕಿಸದ ನಿರ್ದೇಶಕ ಟಿ.ರಾಮಚಂದ್ರ ಅವರು ಮೈಸೂರಿನಿಂದ ರಾಯಚೂರಿಗೆ ಏಕಾಏಕಿ ವರ್ಗಾವಣೆ ಮಾಡಿದ್ದು, ಈಗಲೂ ಮಾನಸಿಕ ಹಿಂಸೆ ನೀಡುತ್ತಲೆ ಬಂದಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ರಾಯಚೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸಂಚಾರಕ್ಕೆ ವಾಹನ ನೀಡಲಿಲ್ಲ. ರಜೆ ಕೇಳಿದರೂ ಕೊಡಲಿಲ್ಲ, ಸುಮ್ಮನೆ ಗೈರು ಹಾಜರಿ ಎಂದು ಸುಳ್ಳು ಹೇಳಿ ವೇತನ ತಡೆ ಹಿಡಿದರು. ಇದೆಲ್ಲವನ್ನೂ ಸರ್ಕಾರದ ಸೇವೆ ಹಿನ್ನೆಲೆಯಲ್ಲಿ ಸಹಿಸಿಕೊಂಡಿದ್ದೆ. ಆದರೆ ಸರ್ಕಾರದ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗೂ ಮನವಿ ಮಾಡಲಾಗಿತ್ತು. ಇದನ್ನು ಸಹಿಸದ ನಿರ್ದೇಶಕರು ತಪ್ಪು ಮಾಹಿತಿ ನೀಡಿ ಕೃಷಿ ಸಚಿವರ ಪ್ರಭಾವ ಬಳಸಿ ನನ್ನನ್ನು ಸೇವೆಯಿಂದ ಅಮಾನತು ಮಾಡಿಸಿದ್ದಾರೆ ಎಂದು ಆರೋಪಿಸಿದರು. ಮೇ 1ರಂದು ನಿರ್ದೇಶಕರು ನಿವೃತ್ತರಾಗಲಿದ್ದು, ಏ.27ರಂದು ಆದೇಶಿಸಿರುವುದು ನೋವು ತಂದಿದೆ. ಸರ್ಕಾರ ಕೂಡಲೇ ನಿವೃತ್ತಿ ಹೊಂದಲಿರುವ ಅಧಿಕಾರಿಯ ಮುಂದಿನ ಸೌಲಭ್ಯ ನೀಡದೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಅಮಾನತು ಆದೇಶ ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ತಮಗಾದ ಅನ್ಯಾಯವನ್ನು ದಾಖಲೆಯೊಂದಿಗೆ ಸಲ್ಲಿಸುವುದಾಗಿ ತಿಳಿಸಿದರು.