ರಾಯಚೂರು: ಆಯುರ್ವೇದ ವೈಜ್ಞಾನಿಕ ಶಾಸ್ತ್ರವಾಗಿದೆ. ಅನೇಕ ವಿಜ್ಞಾನಗಳಿಗೆ ಮೂಲಾಧಾರ ಆಯುರ್ವೇದವಾಗಿದೆ ಎಂದು ರಾಯಚೂರು ವಿವಿ ಹಂಗಾಮಿ ಕುಲಪತಿ ಡಾ.ಸುಯಮೀಂದ್ರ ಕುಲಕರ್ಣಿ ಹೇಳಿದರು.
ರಾಯಚೂರು ವಿವಿಯಲ್ಲಿ ಮತ್ತು ಪೂರ್ಣಿಮಾ, ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಸಂಶೋಧನಾ ಕೇಂದ್ರದ ಸಹಯೋಗಲ್ಲಿ ಶನಿವಾರ ಕೇಂದ್ರ ಸರ್ಕಾರದ ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನದ ನಿಮಿತ್ತ ಹಮ್ಮಿಕೊಂಡಿದ್ದ ಸಮೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದ ಬಳಸಲಾಗುತ್ತಿದೆ. ಆದರೆ ಇಂದು ಅಲೋಪತಿ ಔಷಧವನ್ನು ಹೆಚ್ಚು ಉಪಯೋಗಿಸಲಾಗುತ್ತಿದೆ. ಸಂಶೋಧನಾ ದಿನಗಳಲ್ಲಿ ಪಿಡಿಯಾಟ್ರಿಕ್ ನ್ಯೂರಾಲಾಜಿಸ್ಟ್(ಮಕ್ಕಳ ನರರೋಗ ತಜ್ಞರು) ಸಹಯೋಗದಲ್ಲಿ ಮಾಡಿರುವ ಸಂಶೋಧನೆಯಲ್ಲಿ ಪೂರ್ವಜರು ಪ್ರತಿದಿನ ಬಳಸುತ್ತಿದ್ದ ಘೃತ(ತುಪ್ಪ)ದ ಉಪಯೋಗ ಮತ್ತು ಪ್ರಾಮುಖ್ಯತೆಯನ್ನು ಅರಿತು ಫಿಟ್ಸ್(ಎಪಿಲೆಪ್ಸಿ) ಕಾಯಿಲೆ ವಾಸಿಮಾಡುವ ಗುಣ ತುಪ್ಪದಲ್ಲಿದೆ ಎಂದು ಹೇಳಿದರು.
ಪೂರ್ಣಿಮಾ ಕಾಲೇಜಿನ ಕ್ರಿಯಾ ಶಾರೀರ ವಿಭಾಗದ ಮುಖ್ಯಸ್ಥೆ ಡಾ.ಉಮಾ ಮಹಾಂತೇಶ ಯಾಳಗಿ ಮಾತನಾಡಿ, ಪ್ರಕೃತಿಯು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿಶ್ಚಯಿಸುವ ಒಂದು ಮಾಪನ. ಇದರಿಂದ ಜೀವನ ಶೈಲಿಯ ಹಲವು ರೋಗಗಳನ್ನು ತಡೆಗಟ್ಟಬಹುದು. ಭವಿಷ್ಯದಲ್ಲಿ ಬರಬಹುದಾದ ಕಾಯಿಲೆ ಬಗ್ಗೆ ಮುಂಜಾಗೃತೆ ವಹಿಸಬಹುದು. ವಾತ, ಪಿತ್ತ, ಕಫ ಇವು ದೇಹದ ಸಮತೋಲನ ನಿಯಂತ್ರಿಸುವ ದೋಷಗಳು. ಪ್ರಕೃತಿ ಬದಲಾದಂತೆ ಬದುಕಿನ ಶೈಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸ್ವಾಸ್ಥೃ ಜೀವನ ಸಾಗಿಸಬಹುದು ಎಂದರು.
ತಂತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸುಪ್ರಿತಾ ಲಕ್ಷ್ಮಣ ಶೆಟ್ಟಿ ಮಾತನಾಡಿ, ದೇಶ್ ಕಾ ಪ್ರಕೃತಿ ಪರೀಕ್ಷಾ ಅಭಿಯಾನ ಆ್ಯಪ್ ಮೂಲಕ ಪರೀಕ್ಷೆ ಮಾಡುವ ವಿಧಾನ, ನಂತರ ಡಿಜಿಟಲ್ ಪ್ರಮಾಣಪತ್ರ ಜತೆಗೆ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ದೊರೆಯುತ್ತದೆ. ಇದನ್ನು ಆರೋಗ್ಯಕರ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ರಕ್ತದೊತ್ತಡ ಹಾಗೂ ದೇಹ ತೂಕದ ಪರೀಕ್ಷೆ ನಡೆಸಿ ಮಾರ್ಗದರ್ಶನ ನೀಡಿದರು. ಡಾ.ಕೆ.ವೆಂಕಟೇಶ್, ಪ್ರೊ.ಸಿ.ಎಸ್.ಪಾರ್ವತಿ, ಪ್ರೊ.ಪಿ.ಭಾಸ್ಕರ್ ಇದ್ದರು.