<ಜಿಲ್ಲಾ ಯುವ ಕಾಂಗ್ರೆಸ್ನಿಂದ ಪ್ರತಿಭಟನೆ>
ರಾಯಚೂರು: ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ಉನ್ನತ ಮಟ್ಟದ ತನಿಖೆ ನಡೆಸಲು ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ನಗರದ ಅಂಬೇಡ್ಕರ್ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಸಿತು.
ಹಿಂದಿನ ಯುಪಿಎ ಸರ್ಕಾರ 2012ರಲ್ಲಿ ಫ್ರಾನ್ಸ್ನೊಂದಿಗೆ 526 ಕೋಟಿ ರೂ.ಗೆ ಒಂದು ವಿಮಾನದಂತೆ 126 ವಿಮಾನ ಖರೀದಿ ಮಾಡಿ ಅದರಲ್ಲಿ ಕೇವಲ 16 ಪೂರ್ಣ ಪ್ರಮಾಣದ ವಿಮಾನಗಳು ಹಾಗೂ 108 ಯುದ್ಧ ವಿಮಾನಗಳ ಬಿಡಿ ಭಾಗಗಳನ್ನು ಎಚ್ಎಎಲ್ಗೆ ನೀಡುವ ಮೂಲಕ 10 ಸಾವಿರ ಉದ್ಯೋಗ ಸೃಷ್ಟಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ, 2014ರಲ್ಲಿ ಅಧಿಕಾರಕ್ಕೆ ಬಂದ ಎನ್ಡಿಎ ಸರ್ಕಾರ ಈ ಒಡಂಬಡಿಕೆ ರದ್ದುಪಡಿಸಿ, ಉದ್ಯಮಿ ಅನಿಲ್ ಅಂಬಾನಿಗೆ ಸಹಕಾರ ನೀಡಿ 41 ಸಾವಿರ ಕೋಟಿ ರೂ.ಗೆ ರಿಲಾಯನ್ಸ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ದೂರಿದರು.
ಮೇಕ್ ಇನ್ ಇಂಡಿಯಾ ಎಂಬ ಘೋಷಣೆ ಮಾಡಿ ದೇಶದ ಬೊಕ್ಕಸಕ್ಕೆ ನಷ್ಟವುಂಟು ಮಾಡುವುದರ ಜತೆಗೆ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಾಮಗ್ರಿ ತಯಾರು ಮಾಡದ, ಅನುಭವವಿಲ್ಲದ ರಿಲಾಯನ್ಸ್ ಕಂಪನಿಗೆ ಗುತ್ತಿಗೆ ನೀಡಿ, ಸರ್ಕಾರಿ ಸ್ವಾಮ್ಯದ ಎಚ್ಎಎಲ್ಗೆ ಮುಚ್ಚುವ ಹುನ್ನಾರ ನಡೆಸಿದ್ದಾರೆ. ಕೂಡಲೇ ರಾಷ್ಟ್ರಪತಿಗಳು ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಂಜಿತ್ ಹೀರಾ, ನಗರಸಭೆ ಸದಸ್ಯ ಸಾಜೀದ್ ಸಮೀರ್, ಮುಖಂಡರಾದ ಕೆ.ಅಸ್ಲಂ ಪಾಷಾ, ಎ.ವಸಂತಕುಮಾರ, ಆದೀಲ್ ಚೌದ್ರಿ, ಖಾಜಾ ಭಕ್ತಿಯಾರ್, ಶೇಖ್ ಸಲ್ಮಾನ್, ಖಾಲೀದ್ ಸೈಫ್, ಕಡಗೋಲ್ ಚೇತನ್, ಸುರೇಶ ಇತರರಿದ್ದರು.